ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದ್ದು ವಕೀಲರು ಸಾಕಷ್ಟು ವಾದ ವಿವಾದಗಳನ್ನು ನಡೆಸಿದ್ದಾರೆ. ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಮೊದಲು ವಾದ ಮಾಡುವಾಗ ಪೊಲೀಸರ ತನಿಖೆಯ ಲೋಪಗಳನ್ನು ಎತ್ತಿ ಹಿಡಿದರು. ಅವುಗಳಿಗೆ ಇಂದು ಎಸ್ಪಿಪಿ ಪ್ರಸನ್ನ ಕುಮಾರ್ ಪ್ರತಿ ವಾದ ಮಾಡಿದ್ದಾರೆ.
‘ಆರೋಪಿಗಳು ಎತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇವೆ. ಕೇವಲ ಒಂದು ಏಟು ಹೊಡೆದು ರೇಣುಕಾಸ್ವಾಮಿ ಮೃತಪಟ್ಟಿಲ್ಲ. ಎದೆಗೂಡಿನ 17 ಮೂಳೆ ಮುರಿದಿವೆ. ರಕ್ತ ಬರುವಂತಹ ಗಾಯಗಳಿವೆ. ಹೀಗಾಗಿ ಇದು ಕೊಲೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ಎಸ್ಪಿ ಪ್ರಸಾನ್ನ ಕುಮಾರ್ ಹೇಳಿದರು.
ಘಟನೆ ನಡೆದಾಗ ಇದ್ದಂತಹ ವ್ಯಕ್ತಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಆ ಹೇಳಿಕೆಗಳನ್ನು ಕೂಡ ಉಲ್ಲೇಖಿಸಿ ಎಸ್ಪಿಪಿ ವಾದ ಮಂಡಿಸಿದ್ದಾರೆ.‘ದರ್ಶನ್ ಕಾರಿನಿಂದ ಬಂದವರೇ ರೇಣುಕಾಸ್ವಾಮಿಗೆ ಒದ್ದರು. ಪವಿತ್ರಾಗೌಡ ಚಪ್ಪಲಿಯಿಂದ ಹೊಡೆಯುತ್ತಾಳೆ. ನಂತರ ಆ ಚಪ್ಪಲಿ ತೆಗೆದುಕೊಂಡು ದರ್ಶನ್ ಕೂಡ ಹೊಡೆದಿದ್ದಾರೆ. ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯಾ ಎಂದು ಹೇಳುತ್ತಾ ಹೊಡೆಯುತ್ತಾರೆ. ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ದರ್ಶನ್ ತುಳಿಯುತ್ತಿದ್ದರು. ಪವನ್ ಕೈಲಿ ಮೆಸೇಜ್ ಓದಿಸಿದರು. ನಂತರ ಪ್ಯಾಂಟ್ ಬಿಚ್ಚಿಸಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಒದ್ದರು’ ಎಂದು ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಗಳು ಇವೆ ಎಂದು ಪ್ರಸನ್ನ ಕುಮಾರ್ ಹೇಳಿದರು.
‘ಬಾಸ್ ಹೊಡೆದ ಜಾಗದಲ್ಲಿ ಬ್ಲಡ್ ಬರುತ್ತಿರುವುದಾಗಿ ಸಹ ಆರೋಪಿ ಹೇಳಿದ್ದ. ನೀರು ಕೊಟ್ಟರೆ ಕುಡಿಯುತ್ತಿಲ್ಲವೆಂದು ಕೂಡ ಆರೋಪಿ ಹೇಳಿದ್ದ. ಈ ಎಲ್ಲವನ್ನೂ ಪ್ರತ್ಯಕ್ಷ ಸಾಕ್ಷಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ. ಆಗ ರೇಣುಕಾಸ್ವಾಮಿ ಸತ್ತಿದ್ದನೋ ಇಲ್ಲವೋ ಎಂದು ಹೇಳಲು ವೈದ್ಯರಿರಲಿಲ್ಲ. ಆಗ ನಡೆದ ಘಟನೆಯನ್ನಷ್ಟೇ ಪ್ರತ್ಯಕ್ಷ ಸಾಕ್ಷಿ ಹೇಳಿದ್ದಾನೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಎದೆಯ ಮೂಳೆ ಮುರಿದ ಬಗ್ಗೆ ಇದೆ. ಎದೆಯ ಒಟ್ಟು 17 ಮೂಳೆಗಳು ಮುರಿದಿವೆ. ದರ್ಶನ್ ಹಾಗೂ ಆರೋಪಿಗಳ ಉಪಸ್ಥಿತಿಗೆ ಫೋಟೋಗಳ ಸಾಕ್ಷಿಯಿದೆ. ಶೆಡ್ನಲ್ಲೇ ಈ ಪೋಟೋಗಳನ್ನು ತೆಗೆದುಕೊಂಡಿದ್ದಾರೆ. ಶೆಡ್ನಲ್ಲಿದ್ದ ವಾಹನಗಳೂ ಫೋಟೋದಲ್ಲಿ ಕಾಣಬಹುದು’ ಪ್ರಸನ್ನ ಕುಮಾರ್ ಹೇಳಿದ್ದಾರೆ.
‘ಎ2, ಎ7, ಎ8 ಫೋಟೋ ತೆಗೆಸಿಕೊಂಡಿರುವ ಫೋಟೋ ಇದೆ. ಇದೇ ಶೂ, ಬಟ್ಟೆಗಳನ್ನು ರಿಕವರಿ ಮಾಡಲಾಗಿದೆ. ಎ8 ಡ್ರೈವರ್ ಪ್ಯಾಂಟ್ ಮಾತ್ರ ಬದಲಾಗಿದೆ. ಬಾಡಿ ಶಿಫ್ಟ್ ಮಾಡುವ ಉದ್ದೇಶದಿಂದ ಪ್ಯಾಂಟ್ ಬದಲಿಸಿದ್ದಾನೆ. ಇದಕ್ಕೆ ಪೂರಕವಾಗಿ ಎ8 ಹೇಳಿಕೆ ದಾಖಲಾಗಿದೆ. ನಂತರ ಈ ಫೋಟೋಗಳನ್ನು ಆರೋಪಿಗಳಿಗೆ ಕಳುಹಿಸಿರುತ್ತೇನೆ. ನಂತರ ಬಾಡಿಯನ್ನು ಹಾಲ್ನಲ್ಲಿ ಮಲಗಿಸಿರುತ್ತಾರೆ. ಹಾಲ್ನಲ್ಲಿ ರೇಣುಕಾಸ್ವಾಮಿಯ ಬ್ಲಡ್ ಸ್ವಾಬ್ ಸಿಕ್ಕಿದೆ’ ಎಂದು ಪೊಲೀಸರ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದಾರೆ. ಸುದೀರ್ಘ ವಾದ ವಿವಾದ ಆಲಿಸಿದ ನ್ಯಾಯಾಧೀಶರು ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಿನ ಆದೇಶದವರೆಗೂ ಮುಂದೂಡಿದ್ದಾರೆ.