ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ರಬಕವಿಯ ನಿರೀಕ್ಷಣ ಮಂದಿರದಲ್ಲಿ ಹೆಸರಾದಂತಹ ಸಾಹಿತಿ ಸಿದ್ದರಾಜ ಪೂಜಾರಿಯವರ ಎಪ್ಪತ್ತನೆಯ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ರಬಕವಿ ಬನಹಟ್ಟಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅವಳಿ ನಗರಗಳ ಸ್ನೇಹಿತರ ಬಳಗದವರು ಈ ಕಾರ್ಯಕ್ರಮ ಆಯೋ ಜಿಸಿದ್ದರು.ಕಾವ್ಯ ಹಾಗೂ ಸಂಗೀತ ನನ್ನನ್ನು ಕಾಡುವ ಎರಡು ಅಗಾಧ ವಿಸ್ಮಯಗಳು.ತನ್ಮೂಲಕ ನಾನು ಲೌಕಿಕ ಹಾಗೂ ಅಲೌಕಿಕ ಜೀವನದ ನಿಗೂಢ ಸತ್ಯವನ್ನು ಅರಿಯಲು ಸಾಧ್ಯವಾಯಿತು. ಮಾನವೀಯವಾದುದೆಲ್ಲವೂ ಸಾಹಿತ್ಯದ ಮೂಲಕವೇ ಪ್ರಕಟವಾಗುತ್ತದೆ.
ನಮ್ಮ ಸುತ್ತಲಿನ ಜೀವನವನ್ನು ಗ್ರಹಿಸುವ ತೀಕ್ಷ್ಣ ದೃಷ್ಟಿ ಒದಗುವುದೇ ಕಾವ್ಯದಿಂದ.ಒಂದು ಅರ್ಥದಲ್ಲಿ ಕಾವ್ಯ ಹಾಗೂ ಸಂಗೀತವೆರಡೂ ನನಗೆ ನನ್ನ ಮನಸ್ಸನ್ನು ತೆರೆದು ತೋರಿಸಿವೆ.ಕಾವ್ಯದಿಂದಲೇ ನನಗೆ ಮಾನವೀಯ ಚಿಂತನೆ ಸಾಧ್ಯವಾಗಿದೆ.ಎಲ್ಲಕ್ಕೂ ಮಿಗಿಲಾಗಿ ಕಾವ್ಯ ನಿಮ್ಮೆಲ್ಲರನ್ನೂ ನನ್ನ ಬಳಿಗೆ ಕರೆತಂದಿದೆ ಎಂದು ಕವಿ ಸಿದ್ಧರಾಜ ಪೂಜಾರಿ ತಮ್ಮ ಸಾಹಿತ್ಯ ಜೀವನದ ಕುರಿತು ಅರುಹಿದರು.
ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಜಯವಂತ ಕಾಡದೇವರ,ಮಲ್ಲಿಕಾರ್ಜುನ ಹುಲಗಬಾಳಿ,ಎಂ ಎಸ್ ಬಾದಾಮ ಸಿದ್ಧರಾಜ ಪೂಜಾರಿ ಯವರ ಸಾಹಿತ್ಯ ಕುರಿತು ಮನೋಜ್ಞವಾಗಿ ಮಾತನಾಡಿದರು.ಜಯವಂತ ಕಾಡದೇವರ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಮ ಕೃ ಮೇಗಾಡಿ, ಬಸವರಾಜ ಮೋಪಗಾರ, ಶಿವಾನಂದ ಮಹಾಬಳಶೆಟ್ಟಿ, ಮಲ್ಲಿಕಾರ್ಜುನ್ ತುಂಗಳ. ಈರಣ್ಣ ಸಂಪಗಾವಿ. ಸುರೇಶ ಲಿಂಗೋಜಿ. ರಂಗಸ್ವಾಮಿ ಹಾಗೂ ಸಿದ್ದಪ್ಪ ಮೇಣಿ ಭಾವಗೀತೆಗಳನ್ನು ಹಾಡಿ ರಂಜಿಸಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ