ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಮುಂಬೈಯಲ್ಲಿರುವ ವೊಕಾರ್ಡ್ ಆಸ್ಪತ್ರೆಯಲ್ಲಿ ಇಹ ಲೋಕ ತ್ಯಜಿಸಿದ್ದಾರೆ.
ಡಿ.14ರಂದು ಶ್ಯಾಮ್ ಬೆನಗಲ್ ತಮ್ಮ 90ನೇ ವರ್ಷದ ಹುಟ್ಟುಹಬ್ಬವನ್ನು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದರು.
ಅನಂತ್ ನಾಗ್ ನಟನೆಯ ‘ಅಂಕುರ್’, ಗಿರೀಶ್ ಕಾರ್ನಾಡ್ ಅಭಿನಯದ ‘ನಿಶಾಂತ್’, ಸ್ಮಿತಾ ಪಾಟೀಲ್ ನಟನೆಯ ‘ಮಂಥನ್’, ‘ಭೂಮಿಕಾ’ ಸೇರಿದಂತೆ ಹಲವು ಸಿನಿಮಾಗಳನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದರು. ಪ್ಯಾರಲಲ್ ಸಿನಿಮಾ ಮೂಲಕ ಅವರು ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಹಿಂದಿಯಲ್ಲಿ ಅನಂತ್ ನಾಗ್, ಅಮೋಲ್ ಪಾಲೇಕರ್, ಅಮರೀಶ್ ಪುರಿ, ಗಿರೀಶ್ ಕಾರ್ನಾಡ್ ಅವರಂತಹ ಪ್ರತಿಭಾವಂತ ನಟರ ಜೊತೆ ಅವರು ಹಲವು ಸಿನಿಮಾಗಳನ್ನು ಮಾಡಿದ್ದರು.
18 ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶ್ಯಾಮ್ ಬೆನಗಲ್ ಅವರನ್ನು ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು. ಫಿಲ್ಮ್ ಫೇರ್, ನಂದಿ ಅವಾರ್ಡ್ ಮುಂತಾದ ಗೌರವಗಳು ಕೂಡ ಅವರಿಗೆ ಸಿಕ್ಕಿದ್ದವು. ಪದ್ಮಶ್ರೀ, ಪದ್ಮ ಭೂಷಣ ಪ್ರಶಸ್ತಿಗಳು ಸಹ ಶ್ಯಾಮ್ ಬೆನಗಲ್ ಅವರ ಮುಡಿಗೇರಿದ್ದವು. ಅವರ ನಿಧನದ ಸುದ್ದಿಯನ್ನು ಪುತ್ರಿ ಪಿಯಾ ಬೆನಗಲ್ ಖಚಿತಪಡಿಸಿದ್ದಾರೆ.
ಶ್ಯಾಮ್ ಬೆನಗಲ್, ಡಿಸೆಂಬರ್ 14, 1934 ರಂದು ಹೈದರಾಬಾದ್ನಲ್ಲಿ ಜನಿಸಿದ್ದರು. ಶ್ಯಾಮ್ ಬೆನಗಲ್ ಅವರ ತಂದೆ ಶ್ರೀಧರ್ ಬೆನಗಲ್ ಕರ್ನಾಟಕದವರು. ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಕುಟುಂಬದಿಂದ ಬಂದಿದ್ದ ಇವರು ಛಾಯಾಗ್ರಹಕರಾಗಿದ್ದರು. ಕೇವಲ 12 ವರ್ಷ ಇದ್ದಾಗ ಶ್ಯಾಮ್ ತನ್ನ ತಂದೆ ಉಡುಗೊರೆಯಾಗಿ ನೀಡಿದ ಕ್ಯಾಮೆರಾವನ್ನು ಬಳಸಿಕೊಂಡು ತನ್ನ ಮೊದಲ ಚಲನಚಿತ್ರವನ್ನು ನಿರ್ಮಿಸಿದ್ದರು.