ಬೆಂಗಳೂರು: ಕರಾವಳಿಯಲ್ಲಿ ಕೇಳಿ ಬರುತ್ತಿದ್ದ ಕಂಬಳದ ಕೊಂಬಿನ ಕಹಳೆ ಇನ್ನುಂದೆ ಬೆಂಗಳೂರಿನಲ್ಲಿಯೂ ಕೇಳಿಬರಲಿದೆ. ಹೌದು, 2023-24ರ ಕಂಬಳ ಸೀಸನ್ ಈಗಾಗಲೇ ಆರಂಭವಾಗಿದ್ದು,ನ.25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಯಲಿದೆ.
ಪುತ್ತೂರು ಶಾಸಕ ಅಶೋಕ್ ರೈಗಳ ಸಾರಥ್ಯದಲ್ಲಿ ಬೆಂಗಳೂರು ಕಂಬಳಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಮೊದಲು ಬಂಟ್ವಾಳ ತಾಲೂಕಿನ ಕಕ್ಯಪದವು ಎಂಬಲ್ಲಿ ಮೊದಲ ಕಂಬಳ ನಡೆದಿದೆ. 189 ಜೋಡಿ ಕೋಣಗಳು ಈ ಕೂಟದಲ್ಲಿ ಭಾಗವಹಿಸಿದ್ದವು. ಇದೀಗ ಈ ಕೋಣಗಳು ಬೆಂಗಳೂರಿನತ್ತು ಪ್ರಯಾಣ ಬೆಳಸಿದ್ದಾವೆ.
ಉಪ್ಪಿನಂಗಡಿಯಿಂದ ಪ್ರಯಾಣ ಆರಂಭ
ಉಭಯ ಜಿಲ್ಲೆಯ ಎಲ್ಲಾ ಓಟದ ಕೋಣಗಳೊಂದಿಗೆ ಯಜಮಾನರುಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಉಪ್ಪಿನಂಗಡಿಯ ಕಾಲೇಜು ಮೈದಾನದಲ್ಲಿ ಸೇರಲಿದ್ದಾರೆ. ಅಲ್ಲಿ ಗಣಹೋಮ ನಡೆದು, ಬಳಿಕ ಉಪಹಾರ ಸೇವಿಸಿ 10.30ಕ್ಕೆ ಸರಿಯಾಗಿ ಬೆಂಗಳೂರು ಕಡೆ ಪ್ರಯಾಣ ಆರಂಭಿಸಲಿದ್ದಾರೆ.