ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಣಮಾಪುರ ಗ್ರಾಮದಲ್ಲಿ ಬಡ ಕುಟುಂಬಕ್ಕೆ ಬೇಕಿದೆ ಸಹಾಯದ ಕಾಯಕಲ್ಪ. ಇತ್ತ ಸುಮಾರು ಹತ್ತು ವರ್ಷಗಳಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಚೇತರಿಕೆ ಕಾಣದ ಕೂಸು. ಓದಿ ಪೊಲೀಸ್ ಆಗೊ ಕನಸು ಹೊತ್ತು ವಾರದಲ್ಲಿ ಎರಡು ದಿನ ಶಾಲೆ ಹಾಗೂ ಉಳಿದ ದಿನ ಕೂಲಿ ಕೆಲಸಕ್ಕೆ ಹೋಗಿ ತಂದೆ ತಾಯಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಸಹೋದರರನ್ನು ಸಾಕುತ್ತಿರುವ 9ನೇ ತರಗತಿಯಲ್ಲಿ ಓದುತ್ತಿರುವ ಮಗಳು.
ದುಡಿದು ತಿನ್ನಲು ಒಂದಿಂಚು ಭೂಮಿಯು ಇಲ್ಲ ಸರಿಯಾದ ಮನೆಗೂ ದಿಕ್ಕಿಲ್ಲದಂತಾದ ದುಸ್ಥಿತಿ. ದಿನಾಲು ಕಿತ್ತು ತಿನ್ನುವ ಬಡತನದ ಮಧ್ಯೆ ರಾಜ್ಯ ಸರ್ಕಾರ ನೀಡುತ್ತಿರುವ ಅಕ್ಕಿಯಲ್ಲೆ ಹಸಿವು ನೀಗಿಸಿ ಕೊಳ್ಳುತ್ತಿರುವ ಜೀವಗಳ ಸಂಕಷ್ಟದ ಕರುಣಾಜನಕ ಕಥೆ ಇದು.
ಕೂಲಿನಾಲಿ ಮಾಡಿ ನನ್ನ ಮಗನ ಆರೋಗ್ಯಕ್ಕಾಗಿ ಇಲ್ಲಿಯವರೆಗೆ 6ರಿಂದ 7 ಲಕ್ಷ ಆಸ್ಪತ್ರೆಗೆ ಚೆಲ್ಲಿದಿನಿ ಈಗ ವೈದ್ಯರು ಕಿಡ್ನಿ ಆಪರೇಷನ್ ಹೇಳಿದಾರೆ ನನಗೆ ಜೀವನ ಸಾಕಾಗಿ ನಾನು ನೇಣು ಹಾಕೊಳ್ಳೊ ಪರಿಸ್ಥಿತಿಗೆ ಕಾಲಚಕ್ರ ಯಮನಂತೆ ನಮ್ಮ ಕುಟುಂಬಕ್ಕೆ ಬಂದು ಅಪ್ಪಳಿಸಿದಂತಾಗಿದೆ. ದಯವಿಟ್ಟು ನನ್ನ ಮಗನನ್ನು ಉಳಿಸಿ ಕೊಡಿ ಎಂದು ಅಂಗಲಾಚುತ್ತಿರುವ ತಂದೆಯ ನೋವಿನ ಮಾತುಗಳು ಒಂದೆಡೆಯಾದರೆ, ಇತ್ತ ಕಣ್ಣೇ ಕಾಣದ ಜೀವದ ಮಾತುಗಳು ಎಂಥವರ ಕಣ್ಣಲ್ಲೂ ನೀರು ತರಿಸುವಂತಿವೆ.
ಹಸಿಬಿಸಿ ಅಡುಗೆ ಮಾಡಿದ್ರು ಮಕ್ಕಳು ಹಾಗೆ ತಿಂತಾವೆ ಸರ್..ನನಗೆ ಕಣ್ಣು ಕಾಣಿಸೊದಿಲ್ಲ ಮಗಳ ಸಹಾಯದಿಂದ ಅಡುಗೆ ಮಾಡಿ ಬಡಸ್ತಿನಿ.. ಇತ್ತ ಮಗಳಿಗೆ ಓದಿಸಲು ಆಗದೇ ನಮ್ಮ ಕಷ್ಟದ ಬುತ್ತಿ ದೇವರಿಗೆ ಪ್ರೀತಿ ಎಂಬಂತೆ ಬದುಕು ಸಾಗಿಸುತ್ತಿದ್ದೇವೆ. ದಯವಿಟ್ಟು ನನ್ನ ಮಗನನ್ನು ಉಳಿಸಿ ಕೊಡಿ ಎಂದು ಕಣ್ಣೀರಿಡುತ್ತಿರುವ ತಾಯಿ.. ನಿಜಕ್ಕೂ ಈ ದೃಶ್ಯಗಳನ್ನು ನೋಡುತ್ತಿದ್ದರೆ ಕರುಳು ಕಿತ್ತು ಬರುತ್ತದೆ.