ಬೆಂಗಳೂರು: ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ. ಕೈಗಾರಿಕೋದ್ಯಮಿ, ವಾಣಿಜ್ಯೋದ್ಯಮಿ ಮತ್ತು ಟಾಟಾ ಸನ್ಸ್ನ ಗೌರವಾಧ್ಯಕ್ಷರಾಗಿದ್ದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 86 ವಯಸ್ಸಿನ ಉದ್ಯಮಿ ಆಸಕ್ತಿದಾಯಕ ಮತ್ತು ಬದುಕಿನ ಅನೇಕ ಕಥೆಗಳನ್ನು ಬಿಟ್ಟು ಹೋಗಿದ್ದಾರೆ.
ಭಾರತದ ಯಶಸ್ವಿ ಉದ್ಯಮಿ ಎಂದು ಹೆಸರಾದವರು ರತನ್ ಟಾಟಾ. ಇವರು ತನ್ನ ಸ್ವಂತ ಶ್ರಮ ಹಾಗೂ ಯಶಸ್ಸಿನ ಹಾದಿಯ ಬಗ್ಗೆ ವಿವರಿಸಿದ್ದಾರೆ. ನಾವು ನಮ್ಮ ಯಶಸ್ಸನ್ನು ಸಾಧಿಸಬೇಕಾದರೆ ಯಾವೆಲ್ಲಾ ಪ್ರಯತ್ನವನ್ನು ಕೈಗೊಳ್ಳಬೇಕು? ಎನ್ನುವುದನ್ನು ತಿಳಿಯಬೇಕು. ಇದಕ್ಕೆ ಬೇಕಾದ ತಯಾರಿ ಮತ್ತು ಮಾರ್ಗದರ್ಶನ ಹೇಗಿರಬೇಕು ಎನ್ನುವುದನ್ನು ಟಾಟಾ ಅವರು ತಿಳಿಸಿಕೊಟ್ಟಿದ್ದಾರೆ.
ರತನ್ ಟಾಟಾ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಉದ್ಯಮಿ ಆದವರಿದ್ದಾರೆ. ಹಲವಾರು ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಿದವರಿದ್ದಾರೆ.
ರತನ್ ಟಾಟಾ ಹೇಳಿರುವ 10 ಪ್ರಮುಖ ಮಾತುಗಳು ಇಲ್ಲಿವೆ.
- ಕಬ್ಬಿಣವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲೇ ಹುಟ್ಟುವ ತುಕ್ಕು ಕಬ್ಬಿಣವನ್ನು ನಾಶ ಮಾಡುತ್ತದೆ. ಅದೇ ರೀತಿ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವರ ಸ್ವಂತ ಮನಸ್ಥಿತಿ ಅವರನ್ನು ನಾಶ ಮಾಡಬಹುದು.
- ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ವಿನಮ್ರವಾಗಿ ತೆಗೆದುಕೊಳ್ಳಿ, ಮತ್ತು ಅದೇ ಕಲ್ಲಿನಿಂದ ನಿಮ್ಮ ಇಚ್ಛೆಯ ಸ್ಮಾರಕವನ್ನು ನಿರ್ಮಿಸಿ
- ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅವುಗಳನ್ನು ಸರಿಯಾಗಿ ಮಾಡುತ್ತೇನೆ.
- ‘ಯಾವ ದಿನ ನನಗೆ ಹಾರಲು ಸಾಧ್ಯವಾಗೋದಿಲ್ಲವೋ, ಆ ದಿನ ನನಗೆ ದುಃಖದ ದಿನವಾಗಿರುತ್ತದೆ…’ ವಿಮಾನ ಪ್ರಯಾಣದ ಕುರಿತಾಗಿ ರತನ್ ಟಾಟಾ ಹೇಳಿದ ಮಾತು
- ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸೋಲು ಕಾಣುವ ಏಕೈಕ ಮಾರ್ಗ ಎಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು.
- ‘ಬದುಕಿನ ಕೊನೆಯಲ್ಲಿ, ನಾವು ತೆಗೆದುಕೊಳ್ಳದ ಅವಕಾಶಗಳಿಗೆ ಮಾತ್ರ ನಾವು ವಿಷಾದಪಡುತ್ತೇವೆ..’ ಸಂದರ್ಶನವೊಂದರಲ್ಲಿ ಬದುಕಿನ ಬಗ್ಗೆ ಹೇಳಿದ ಮಾತು..
- ಜೀವನದಲ್ಲಿ ಏರಿಳಿತಗಳು ನಮ್ಮನ್ನು ಮುಂದುವರಿಸಲು ಬಹಳ ಮುಖ್ಯ ಏಕೆಂದರೆ ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ನಾವು ಜೀವಂತವಾಗಿಲ್ಲ ಎಂದೇ ತೋರಿಸುತ್ತದೆ.
- ನಾನು ಯಾವಾಗಲೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಇದ್ದೇನೆ. ದೇಶದ ಶಕ್ತಿ ನನಗೆ ಗೊತ್ತು..
- ನಾನು ಕೆಲಸ-ಜೀವನದ ಸಮತೋಲನವನ್ನು ನಂಬುವುದಿಲ್ಲ. ನಾನು ಕೆಲಸ-ಜೀವನದ ಏಕೀಕರಣವನ್ನು ನಂಬುತ್ತೇನೆ. ನಿಮ್ಮ ಕೆಲಸ ಮತ್ತು ಜೀವನವನ್ನು ಅರ್ಥಪೂರ್ಣ ಮತ್ತು ಪೂರೈಸುವಂತೆ ಮಾಡಿ ಮತ್ತು ಅವು ಪರಸ್ಪರ ಪೂರಕವಾಗಿರುತ್ತವೆ.
- ಸಮಗ್ರತೆ, ಬದ್ಧತೆ ಇರುವ ವ್ಯಕ್ತಿಯಾಗಿ ಬದುಕಿ. ಜೀವನದಲ್ಲಿ ಯಾವಾಗಲೂ ಸರಿಯಾದದ್ದನ್ನು ಮಾಡಲು ಪ್ರಯತ್ನ ಮಾಡಿ ಅದು ಕಷ್ಟವಾಗಿದ್ದರೂ ಸಹ.