ಮೆಲ್ಬರ್ನ್: 2023ರ ಕ್ಯಾಲೆಂಡರ್ ವರ್ಷದಲ್ಲಿ ತೋರಿದ ಉತ್ತಮ ಪ್ರದರ್ಶನಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಎಲ್ಲಿಸ್ ಪೆರ್ರಿ (Ellyse Perry) ಹಾಗೂ ಆಸ್ಟ್ರೇಲಿಯಾ ಪುರುಷರ ತಂಡದ ಸ್ಟಾರ್ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ಸೇರಿದಂತೆ ಹಲವರಿಗೆ ʻಕ್ರಿಕೆಟರ್ ಆಫ್ ದಿ ಇಯರ್-2023ʼಪ್ರಶಸ್ತಿ ಲಭಿಸಿದೆ.
ಮೆಲ್ಬರ್ನ್ನಲ್ಲಿ ನಡೆದ ವಾರ್ಷಿಕ ಪ್ರಶಸ್ತಿ ಪ್ರದಾನ ಸಂಮಾರಂಭದಲ್ಲಿ 2023ರ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಹಲವು ಕ್ರಿಕೆಟಿಗರಿಗೆ ವಾರ್ಷಿಕ ಪ್ರಶಸ್ತಿಗಳನ್ನ ವಿತರಿಸಲಾಯಿತು. ಕಳೆದ ವರ್ಷ ಆಸೀಸ್ ತಂಡವು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ (WTC) ಹಾಗೂ 2023ರ ಏಕದಿನ ವಿಶ್ವಕಪ್ (ODI World Cup) ಟೂರ್ನಿಯಲ್ಲಿ ಭಾರತ ತಂಡವನ್ನು ಸೋಲಿಸಿತ್ತು. ಅಲ್ಲದೇ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 2-2 ಅಂತರದಲ್ಲಿ ಗೆದ್ದು ಸಮಬಲ ಸಾಧಿಸಿತು. ಈ ಎಲ್ಲ ಟೂರ್ನಿಗಳು ಸೇರಿದಂತೆ ವರ್ಷದಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಮಿಚೆಲ್ ಮಾರ್ಷ್ಗೆ ವರ್ಷದ ಕ್ರಿಕೆಟಿಗ (Cricketer Of The year) ಪ್ರಶಸ್ತಿ ನೀಡಲಾಯಿತು
ಅಲ್ಲದೇ ಮಿಚೆಲ್ ಮಾರ್ಷ್, ಆಸೀಸ್ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಅಗ್ರ ಕ್ರಮಾಂಕದ ಬ್ಯಾಟರ್ ಸ್ಟೀವ್ ಸ್ಮಿತ್ ಅವರಿಗೆ ಅಲನ್ ಬಾರ್ಡರ್ ಪದಕ ನೀಡಿ ಗೌರವಿಸಲಾಯಿತು. ಇನ್ನೂ 26 ವರ್ಷದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಆಶ್ಲೀಗ್ ಗಾರ್ಡ್ನರ್ ʻಬೆಲಿಂಡಾ ಕ್ಲಾರ್ಕ್ʼ ಪ್ರಶಸ್ತಿಗೆ (ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟ್ ಆಟಗಾರ್ತಿ) ಪಾತ್ರರಾದರು. ಆರ್ಸಿಬಿ ಮಹಿಳಾ ತಂಡದ ಆಟಗಾರ್ತಿಯೂ ಆಗಿರುವ ಎಲ್ಲಿಸ್ ಪೆರ್ರಿಗೆ ಮಹಿಳಾ ವಿಭಾಗದ T20I ಕ್ರಿಕೆಟ್ನಲ್ಲಿ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ನೀಡಲಾಯಿತು.
ಯಾರಿಗೆಲ್ಲ ಪ್ರಶಸ್ತಿ?
* ಅಲನ್ ಬಾರ್ಡರ್ ಪದಕ: ಮಿಚೆಲ್ ಮಾರ್ಷ್
* ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ: ಆಶ್ಲೀ ಗಾರ್ಡ್ನರ್
* ಶೇನ್ ವಾರ್ನ್ ವರ್ಷದ ಪುರುಷರ ಟೆಸ್ಟ್ ಆಟಗಾರ: ನಾಥನ್ ಲಿಯಾನ್
* ಪುರುಷರ ODI ವರ್ಷದ ಆಟಗಾರ: ಮಿಚೆಲ್ ಮಾರ್ಷ್
* ವರ್ಷದ ಮಹಿಳಾ ODI ಆಟಗಾರ್ತಿ: ಎಲ್ಲಿಸ್ ಪೆರ್ರಿ
* ಪುರುಷರ T20I ವರ್ಷದ ಆಟಗಾರ: ಜೇಸನ್ ಬೆಹ್ರೆಂಡಾರ್ಫ್
* ಮಹಿಳಾ T20I ವರ್ಷದ ಆಟಗಾರ್ತಿ: ಎಲ್ಲಿಸ್ ಪೆರ್ರಿ
* BBL ಟೂರ್ನಿ ಆಟಗಾರ: ಮ್ಯಾಟ್ ಶಾರ್ಟ್ (ಅಡಿಲೇಡ್ ಸ್ಟ್ರೈಕರ್ಸ್)
* WBBL ಟೂರ್ನಿ ಆಟಗಾರ್ತಿ: ಚಾಮರಿ ಅಥಾಪತ್ತು (ಸಿಡ್ನಿ ಥಂಡರ್)
* ವರ್ಷದ ಪುರುಷರ ದೇಶೀಯ ಕ್ರಿಕೆಟಿಗ: ಕ್ಯಾಮೆರಾನ್ ಬ್ಯಾಂಕ್ರಾಫ್ಟ್
* ವರ್ಷದ ಮಹಿಳಾ ದೇಶೀಯ ಕ್ರಿಕೆಟಿಗ: ಸೋಫಿ ಡೇ ಮತ್ತು ಎಲಿಸ್ ವಿಲ್ಲಾನಿ
* ಡಾನ್ ಬ್ರಾಡ್ಮನ್ ವರ್ಷದ ಯುವ ಕ್ರಿಕೆಟಿಗ: ಫರ್ಗುಸ್ ಓ’ನೀಲ್
* ಬೆಟ್ಟಿ ವಿಲ್ಸನ್ ವರ್ಷದ ಯುವ ಕ್ರಿಕೆಟಿಗ: ಎಮ್ಮಾ ಡಿ ಬ್ರೌಗ್