ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ರಿಲೀಸ್ ಆಗಲಿದ್ದಾರೆ ಎಂದು ವರದಿಯಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ KGF ಜೋಡಿ ಬೇರ್ಪಡುವುದು ಬಹುತೇಕ ಖಚಿತವಾದಂತಾಗಿದೆ. ಈ ಹಿಂದೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಆರ್ಸಿಬಿ ತಂಡದ ಕೆಜಿಎಫ್ ಜೋಡಿಗಳಾಗಿ ಗುರುತಿಸಿಕೊಂಡಿದ್ದರು. ಇದೀಗ ತ್ರಿವಳಿ ಗುಂಪಿನಿಂದ ಇಬ್ಬರು ಆಟಗಾರರು ಹೊರಬೀಳುವ ಸುದ್ದಿ ಹೊರಬಿದ್ದಿದೆ.
ಅಲ್ಲದೆ ಮುಂಬರುವ ಸೀಸನ್ನಲ್ಲಿ ಆರ್ಸಿಬಿ ತಂಡವನ್ನು ಹೊಸ ನಾಯಕ ಮುನ್ನಡೆಸುವ ಸಾಧ್ಯತೆಯಿದೆ. 2022 ರಿಂದ ಆರ್ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. ಅಲ್ಲದೆ 45 ಪಂದ್ಯಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿರುವ ಫಾಫ್ 15 ಅರ್ಧಶತಕಗಳೊಂದಿಗೆ ಒಟ್ಟು 1636 ರನ್ ಕಲೆಹಾಕಿದ್ದಾರೆ.
ಇದಾಗ್ಯೂ ಫಾಫ್ ಡುಪ್ಲೆಸಿಸ್ ಅವರನ್ನು ಆರ್ಸಿಬಿ ಉಳಿಸಿಕೊಳ್ಳದಿರಲು ಮುಖ್ಯ ಕಾರಣ ಅವರ ವಯಸ್ಸು. ಏಕೆಂದರೆ ಈಗಾಗಲೇ 40 ವರ್ಷ ದಾಟಿರುವ ಅವರು ಮುಂಬರುವ ಸೀಸನ್ಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಅಲ್ಲದೆ ಭವಿಷ್ಯದ ದೃಷ್ಟಿಯಲ್ಲಿ ಈಗಲೇ ಆರ್ಸಿಬಿ ಬದಲಿ ನಾಯಕನನ್ನು ರೂಪಿಸಿಕೊಳ್ಳಬೇಕಿದೆ. ಹೀಗಾಗಿಯೇ ಫಾಫ್ ಡುಪ್ಲೆಸಿಸ್ ಅವರನ್ನು ಕೈ ಬಿಡಲು ಆರ್ಸಿಬಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕೈ ಬಿಡುವ ನಿರ್ಧಾರಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಪ್ರದರ್ಶನ. ಐಪಿಎಲ್ 2024 ರಲ್ಲಿ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಹೀಗಾಗಿಯೇ ಆರ್ಸಿಬಿ ಮ್ಯಾಕ್ಸ್ವೆಲ್ ಅವರನ್ನು ರಿಲೀಸ್ ಮಾಡಲು ಮುಂದಾಗಿದೆ.