ಬೆಂಗಳೂರು: ಕೈಗಾರಿಕೋದ್ಯಮಿ, ವಾಣಿಜ್ಯೋದ್ಯಮಿ ಮತ್ತು ಟಾಟಾ ಸನ್ಸ್ನ ಗೌರವಾಧ್ಯಕ್ಷರಾಗಿದ್ದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. “ಟಾಟಾ” ಈ ಹೆಸರಿನ ಬಗ್ಗೆ ಅಷ್ಟೊಂದು ಹೇಳಬೇಕಾಗಿಲ್ಲ ಯಾಕೆಂದರೆ ಸಾಮಾನ್ಯವಾಗಿ ಇದರ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ನಾವು ಅಡುಗೇಲಿ ಉಪಯೋಗಿಸೋ ಉಪ್ಪು, ದಿನಬೆಳಗಾದರೆ ಕುಡಿಯೋ ಚಹಾ, ಸ್ಟೀಲ್, ಕಾರು, ಟ್ರಕ್, ಫೈನಾನ್ಸ್, ಇನ್ಶುರೆನ್ಸ್, ಟ್ರಸ್ಟ್ ಸೇರಿದಂತೆ ಇನ್ನು ಹಲವೆಡೆ ನಾವು ಈ ಹೆಸರನ್ನು ನೋಡಬಹುದು. ಭಾರತದಲ್ಲೇ ಅತಿ ದೊಡ್ಡ ವ್ಯಾಪಾರ ಸಂಸ್ಥೆಯೆಂದೇ ಗುರುತಿಸಿಕೊಂಡ ಟಾಟಾ ವನ್ನು ಯಶಸ್ಸಿನತ್ತ ತೆಗೆದುಕೊಂಡು ಹೋದವರು ರತನ್ ನಾವಲ್ ಟಾಟಾ ಅಂದರೆ ರತನ್ ಟಾಟಾ.
ಭಾರತ ರತ್ನ ಗೌರವವನ್ನು ರತನ್ ಟಾಟಾ ಅವರಿಗೆ ನೀಡಬೇಕು. ಲಕ್ಷಾಂತರ ಜನರಿಗೆ ಟಾಟಾ ಕಂಪನಿ ಉದ್ಯೋಗ ನೀಡಿದೆ. ಸಾಮಾಜಿಕ ಕಾರ್ಯಕ್ಕೆ ಕೋಟ್ಯಂತರ ರೂ. ಹಣವನ್ನು ಟಾಟಾ ಗ್ರೂಪ್ ನೀಡಿದೆ. ಹೀಗಾಗಿ ಭಾರತ ರತ್ನ ಗೌರವಕ್ಕೆ ರತನ್ ಟಾಟಾ ಅರ್ಹ ವ್ಯಕ್ತಿ ಎಂದು ಹೇಳಿ #BharatRatnaForRatanTata ಹ್ಯಾಷ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗಿತ್ತು.
ಟಾಟಾ ಗ್ರೂಪ್ ಸಂಸ್ಥಾಪಕ ಜೆಮ್ಶೆಟ್ಜಿ ಅವರ ಮೊಮ್ಮಗನಾದ ರತನ್, 1937ರ ಡಿ.28ರಂದು ಸೂರತ್ನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ-ತಾಯಿ ಬೇರೆಯಾದರು. ಅಜ್ಜಿಯ ಬಳಿಯೇ ಅವರು ಬೆಳೆಯಬೇಕಾಯಿತು. ”ನನ್ನ ಬಾಲ್ಯ ತುಂಬಾ ಚೆನ್ನಾಗಿತ್ತು. ಆದರೆ, ನಾನು ಮತ್ತು ನನ್ನ ಸಹೋದರ ಬೆಳೆದು ದೊಡ್ಡವರಾಗುತ್ತಿದ್ದಂತೆಯೇ ಕೆಲವೊಂದು ಕಷ್ಟದ ಸನ್ನಿವೇಶಗಳನ್ನು ಎದುರಿಸಬೇಕಾಯಿತು. ಏಕೆಂದರೆ, ಆಗ ನಮ್ಮ ಹೆತ್ತವರು ವಿಚ್ಛೇದನ ಪಡೆದಿದ್ದರು. ಆಗಿನ ದಿನಗಳು ಇಂದಿನಂತೆ ಸಾಮಾನ್ಯವಾಗಿರಲಿಲ್ಲ.
ಆದರೆ, ನಮ್ಮನ್ನು ನಮ್ಮ ಅಜ್ಜಿ ಎಲ್ಲಾ ರೀತಿಯಲ್ಲೂ ಪ್ರೀತಿಯಿಂದ ಸಲಹಿದರು. ನನ್ನ ತಾಯಿ ಮರು ಮದುವೆಯಾದ ಬಳಿಕವಂತೂ ಶಾಲೆಯ ಇತರ ಹುಡುಗರು ತುಂಬಾ ಹಗರವಾದ ಮಾತನಾಡಲು ಆರಂಭಿಸಿದ್ದರು. ಆದರೆ, ಇಂತಹ ಸಂದರ್ಭದಲ್ಲಿ ಘನತೆ, ಗೌರವವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಮ್ಮ ಅಜ್ಜಿ ನಮಗೆ ಕಲಿಸಿದರು. ಅಜ್ಜಿ ಕಲಿಸಿಕೊಟ್ಟಿದ್ದ ಪಾಠ ಮತ್ತು ಮೌಲ್ಯವನ್ನು ಇಂದಿಗೂ ನಾನು ಪಾಲಿಸುತ್ತಿದ್ದೇನೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ರತನ್ ಹೇಳಿಕೊಂಡಿದ್ದಾರೆ. ಮುಂಬಯಿನಲ್ಲಿ ಆರಂಭಿಕ ವಿದ್ಯಾಭ್ಯಾಸವಾಯಿತು. 1962ರಲ್ಲಿ ಕಾರ್ನೆಲ್ ವಿವಿಯಲ್ಲಿ ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಮೇಲೆ, ಟಾಟಾ ಗ್ರೂಪ್ ಪ್ರವೇಶಿಸಿದರು.
ಅಂದ ಹಾಗೇ, ಉದ್ಯಮಿಗಳಲ್ಲಿ ಮೇಲೆ ಮೇಲೆ ಏರುವ ತವಕ ಸಹಜ. ಆದರೆ, ಆಕಾಶಕ್ಕೇರುವ ನೈಪುಣ್ಯತೆಯನ್ನು ರತನ್ ಹೊಂದಿದ್ದಾರೆ. ಅವರ ಬಳಿ ಲೈಸೆನ್ಸ್ ಸಹ ಇದೆ. ಇಷ್ಟಕ್ಕೂ 2007ರಲ್ಲೇ ಅವರು ಬೆಂಗಳೂರಿನ ಏರ್ ಇಂಡಿಯಾ ಶೋನಲ್ಲಿ ‘ಎಫ್-16’ ನಡೆಸಿದ್ದರು. ಅಲ್ಲದೇ ಸಹ-ಪೈಲಟ್ ಆಗಿ ಯುದ್ಧ ವಿಮಾನವನ್ನು 40 ನಿಮಿಷ ಹಾರಿಸಿದ್ದೂ ಉಂಟು. 69ನೇ ವಯಸ್ಸಿನಲ್ಲೂ ವಿಮಾನವನ್ನು ಓಡಿಸಿದವರು.
ಭಾರತದ ಅಗ್ರ ಕುಬೇರರ ಪಟ್ಟಿಯಲ್ಲಿ ರತನ್ ಇಲ್ಲ. ಅವರ ಒಟ್ಟು ಸಂಪತ್ತು 100 ಕೋಟಿ ಡಾಲರ್(ಸುಮಾರು 7,400 ಕೋಟಿ ರೂ.). ಆದರೆ, ಉದಾರತೆಯಲ್ಲಿ ಇವರಿಗೆ ಇವರೇ ಸಾಟಿ. ತಮ್ಮ ಶೇ.60ರಷ್ಟು ಷೇರುಗಳನ್ನು ಚಾರಿಟಬಲ್ ಟ್ರಸ್ಟ್ಗೆ ಹಾಕಿದ ಏಕೈಕ ಭಾರತೀಯ ಉದ್ಯಮಿ ಎನ್ನುವ ಹೆಗ್ಗಳಿಕೆ ರತನ್ ಅವರದು. ”ಈ ದೇಶವು ಎಲ್ಲರಿಗೂ ಸಮಾನ ಅವಕಾಶಗಳ ನೆಲೆಯಾಗಬೇಕು ಎನ್ನುವುದು ನನ್ನ ಕನಸು. ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಅಳಿಸಿಹೋಗಬೇಕು,” ಎನ್ನುವ ರತನ್ ಟಾಟಾ ಮಾತುಗಳೇ, ಅವರ ವ್ಯಕ್ತಿತ್ವವನ್ನೂ ಬಿಚ್ಚಿಟ್ಟಿವೆ.
ಜನರ ಬಗೆಗಷ್ಟೇ ಅಲ್ಲ ಅವರ ಶ್ವಾನ ಪ್ರೀತಿಯೂ ಎಲ್ಲರಿಗೂ ಗೊತ್ತು. ತಮ್ಮ ದಿವಂಗತ ನಾಯಿಯ 14ನೇ ಜನ್ಮದಿನವನ್ನೂ ಅವರು ನೆನಪಿಟ್ಟುಕೊಂಡು, ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಅವರ ಬಾಂಬೆ ಹೌಸ್ನ ಒಂದು ಭಾಗವು ಅನೇಕ ವರ್ಷಗಳಿಂದ ಬೀದಿ ನಾಯಿಗಳಿಗೆ ಆಸರೆ ಕೇಂದ್ರವಾಗಿದೆ.
ಇತ್ತೀಚಿನ ದಿನಗಳಲ್ಲಿ ಯುವ ನವೋದ್ಯಮಿಗಳನ್ನು ಬೆಂಬಲಿಸುತ್ತಿರುವ ರತನ್ ಟಾಟಾ, ಡಜನ್ಗೂ ಅಧಿಕ ಸ್ಟಾರ್ಟಪ್ಗಳಲ್ಲಿ ಹಣ ಹೂಡಿದ್ದಾರೆ. ಸಾಕು ಪ್ರಾಣಿಗಳಿಗೆ ಆಹಾರ ಒದಗಿಸುವ ಆನ್ಲೈನ್ ಸ್ಟೋರ್ ‘ಡಾಗ್ಸ್ಟಾಟ್’, ಆಹಾರ ಮತ್ತು ಇತರೆ ಉತ್ಪನ್ನಗಳ ಸ್ಟಾರ್ಟಪ್ಗಳಿಗೆ ಸಾಥ್ ನೀಡಿದ್ದಾರೆ. ಓಲಾ, ಒನ್97 ಕಮ್ಯುನಿಕೇಷನ್ಸ್(ಪೇಟಿಎಂ), ಸ್ನ್ಯಾಪ್ಡೀಲ್, ಅರ್ಬನ್ಕ್ಲಾಪ್, ಫಸ್ಟ್ಸಿಟಿ, ಅರ್ಬನ್ಲ್ಯಾಡರ್ಗಳಲ್ಲಿ ರತನ್ ಹೂಡಿಕೆ ಇದೆ.
ರತನ್ ಟಾಟಾ ಸಿಕ್ಕಿದ ಪ್ರಶಸ್ತಿಗಳು
* ಪದ್ಮಭೂಷಣ (ಭಾರತ ಸರ್ಕಾರದ 3ನೇ ಅತ್ಯುನ್ನತ ನಾಗರಿಕ ಗೌರವ (2000)
* ಓರಿಯಂಟಲ್ ರಿಪಬ್ಲಿಕ್ ಆಫ್ ಉರುಗ್ವೆಯ ಪದಕ (ಉರುಗ್ವೆ ಸರ್ಕಾರ (2004)
* ಇಂಟರ್ನ್ಯಾಷನಲ್ ಡಿಸ್ಟಿಂಗ್ವಿಶ್ಡ್ ಅಚೀವ್ಮೆಂಟ್ ಅವಾರ್ಡ್ (2005)
* ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ಗೌರವ ಫೆಲೋಶಿಪ್ (2007)
* ಪದ್ಮವಿಭೂಷಣ (ಭಾರತ ಸರ್ಕಾರದ 2ನೇ ಅತ್ಯುನ್ನತ ನಾಗರಿಕ ಗೌರವ (2008)
* ಇಟಾಲಿಯನ್ ರಿಪಬ್ಲಿಕ್ ಆರ್ಡರ್ ಆಫ್ ಮೆರಿಟ್ನ ‘ಗ್ರ್ಯಾಂಡ್ ಆಫೀಸರ್’ ಪ್ರಶಸ್ತಿ (ಇಟಲಿ ಸರ್ಕಾರ -2009)
* ಗೌರವ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್, ಯುಕೆ (2009)
* ಓಸ್ಲೋ ಬಿಸಿನೆಸ್ ಫಾರ್ ಪೀಸ್ ಅವಾರ್ಡ್ (ಬಿಸಿನೆಸ್ ಫಾರ್ ಪೀಸ್ ಫೌಂಡೇಶನ್ – 2010)