ಮುಂಬೈ: ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ಅವರು ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. “ಟಾಟಾ” ಈ ಹೆಸರಿನ ಬಗ್ಗೆ ಅಷ್ಟೊಂದು ಹೇಳಬೇಕಾಗಿಲ್ಲ ಯಾಕೆಂದರೆ ಸಾಮಾನ್ಯವಾಗಿ ಇದರ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇರುತ್ತದೆ. ನಾವು ಅಡುಗೇಲಿ ಉಪಯೋಗಿಸೋ ಉಪ್ಪು, ದಿನಬೆಳಗಾದರೆ ಕುಡಿಯೋ ಚಹಾ, ಸ್ಟೀಲ್, ಕಾರು, ಟ್ರಕ್, ಫೈನಾನ್ಸ್, ಇನ್ಶುರೆನ್ಸ್, ಟ್ರಸ್ಟ್ ಸೇರಿದಂತೆ ಇನ್ನು ಹಲವೆಡೆ ನಾವು ಈ ಹೆಸರನ್ನು ನೋಡಬಹುದು.
ಭಾರತದಲ್ಲೇ ಅತಿ ದೊಡ್ಡ ವ್ಯಾಪಾರ ಸಂಸ್ಥೆಯೆಂದೇ ಗುರುತಿಸಿಕೊಂಡ ಟಾಟಾ ವನ್ನು ಯಶಸ್ಸಿನತ್ತ ತೆಗೆದುಕೊಂಡು ಹೋದವರು ರತನ್ ನಾವಲ್ ಟಾಟಾ ಅಂದರೆ ರತನ್ ಟಾಟಾ. 1991ರಲ್ಲಿ ಟಾಟಾ ಗ್ರೂಪ್ಸ್ ಅಧ್ಯಕ್ಷರಾಗಿ ನೇಮಕಗೊಂಡ ರತನ್ ಟಾಟಾ ಅವರು ಕೈ ಹಾಕಿದ್ದ ಮೊದಲ ಉದ್ಯಮದಲ್ಲಿ ಜಯಭೇರಿ ಬಾರಿಸಿದ್ದರು.
ಟಾಟಾ ಸಮೂಹದ ʻದಿ ನ್ಯಾಷನಲ್ ರೇಡಿಯೋʼ ಮತ್ತು ʻಎಲೆಕ್ಟ್ರಾನಿಕ್ ಕಂಪನಿ ಲಿಮಿಟೆಡ್ʼ ಅಳಿವಿನಂಚಿನಲ್ಲಿತ್ತು. ಆಗಿನ ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದ ಜೆಆರ್ಡಿ ಟಾಟಾ ಅವರು ಕಂಪನಿಯ ಪುನಶ್ವೇತನದ ಆಸೆಯನ್ನು ಬಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅಂದರೆ 1971ರಲ್ಲಿ ರತನ್ ಟಾಟಾ ಅವರು ನ್ಯಾಷನಲ್ ರೇಡಿಯೋ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್ (ಎನ್ಇಎಲ್ಸಿಒ)ಗೆ ನಿರ್ದೇಶಕರಾಗಿ ನೇಮಕಗೊಂಡರು.
ಕಂಪನಿಯ ಸಾಂಪ್ರದಾಯಿಕ ಪದ್ಧತಿಗಳಿಗೆ ಅಂಟಿಕೊಂಡು ಕುಳಿತುಕೊಳ್ಳದ ಅವರು ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಹೊಂದಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸಲು ಕೈ ಹಾಕಿದರು. ಇದರಿಂದ ಎನ್ಇಎಲ್ಸಿಒ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಾ ಸಾಗಿತು. ರತನ್ ಟಾಟಾ ಅವರು ಬರುವ ಮುನ್ನ ಶೇ.2 ರಷ್ಟಿದ್ದ ಕಂಪನಿಯ ಮಾರುಕಟ್ಟೆ ಶೇರು ಶೇ.30ಕ್ಕೇರಿತು. ಹಾಗಾಗಿ ಕಂಪನಿ ನಷ್ಟದ ಭಯದಿಂದ ಆಚೆ ಬಂದಿತ್ತು.
ಬಳಿಕ 1975ರ ತುರ್ತು ಪರಿಸ್ಥಿತಿಯಿಂದಾಗಿ ಕಂಪನಿ ವಹಿವಾಟಿನಲ್ಲಿ ಆರ್ಥಿಕ ಹಿನ್ನಡೆ ಕಂಡುಬಂದಿತು. ಸಮಸ್ಯೆ ಅರ್ಥಮಾಡಿಕೊಳ್ಳದ ಕಾರ್ಮಿಕ ಒಕ್ಕೂಟ ಧರಣಿಯಲ್ಲಿ ನಿರತವಾಯಿತು. ಇದರಿಂದ ಉತ್ಪಾದನೆ ಸ್ಥಗಿತವಾಗಿ ಕಂಪನಿಯನ್ನೇ ಮುಚ್ಚಬೇಕಾಯಿತು.