ಬೆಂಗಳೂರು: ದೇಶದ ಅಗ್ರಗಣ್ಯ ಉದ್ಯಮಿ, ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಣ ನೀಡಿ ಪ್ರಶಸ್ತಿ ತೆಗೆದುಕೊಳ್ಳುವ ಸಮಯದಲ್ಲಿ ಟಾಟಾ ಗ್ರೂಪ್ ಮುಖ್ಯಸ್ಥರಾಗಿದ್ದ ರತನ್ ಟಾಟಾ ಅವರಿಗೆ ಭಾರತ ರತ್ನ ಸಿಗಬೇಕೆಂದು ಅಭಿಯಾನ ನಡೆಸುತ್ತಿದ್ದಾಗ ನಾನು ಭಾರತೀಯನಾಗಿರುವುದೇ ಅದೃಷ್ಟ ಎಂದು ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು.
ಭಾರತ ರತ್ನ ಗೌರವವನ್ನು ರತನ್ ಟಾಟಾ ಅವರಿಗೆ ನೀಡಬೇಕು. ಲಕ್ಷಾಂತರ ಜನರಿಗೆ ಟಾಟಾ ಕಂಪನಿ ಉದ್ಯೋಗ ನೀಡಿದೆ. ಸಾಮಾಜಿಕ ಕಾರ್ಯಕ್ಕೆ ಕೋಟ್ಯಂತರ ರೂ. ಹಣವನ್ನು ಟಾಟಾ ಗ್ರೂಪ್ ನೀಡಿದೆ. ಹೀಗಾಗಿ ಭಾರತ ರತ್ನ ಗೌರವಕ್ಕೆ ರತನ್ ಟಾಟಾ ಅರ್ಹ ವ್ಯಕ್ತಿ ಎಂದು ಹೇಳಿ #BharatRatnaForRatanTata ಹ್ಯಾಷ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗಿತ್ತು.
ಅಭಿಯಾನ ಜೋರಾಗುತ್ತಿದ್ದಂತೆ ನಾನು ಭಾರತೀಯನಾಗಿ ಹುಟ್ಟಿದ್ದಕ್ಕೆ ಅದೃಷ್ಟ ಪಡುತ್ತೇನೆ. ನನ್ನ ಪರವಾಗಿ ಪ್ರಶಸ್ತಿ ನೀಡುವಂತೆ ಅಭಿಯಾನ ನಡೆಸಬೇಡಿ ಎಂದು ರತನ್ ಟಾಟಾ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು
ಈ ವಿಚಾರ ತನ್ನ ಗಮನಕ್ಕೆ ಬರುತ್ತಿದ್ದಂತೆ ರತನ್ ಟಾಟಾ ಹೇಳಿಕೆ ಬಿಡುಗಡೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ವ್ಯಕ್ತಪಡಿಸುತ್ತಿರುವ ಭಾವನೆಯನ್ನು ನಾನು ಗೌರವಿಸುತ್ತೇನೆ. ಹೀಗಿದ್ದರೂ ಪ್ರಶಸ್ತಿ ವಿಚಾರವಾಗಿ ನಡೆಸುತ್ತಿರುವ ಅಭಿಯಾನವನ್ನು ನಿಲ್ಲಿಸಬೇಕೆಂದು ನಾನು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ನಾನು ಭಾರತೀಯನಾಗಿರುವುದು ಅದೃಷ್ಟ ಮತ್ತು ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದರು.
ರತನ್ ಟಾಟಾ ಅವರ ಈ ಟ್ವೀಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಟ್ವೀಟ್ಗೆ ಯಾರಿಗೋ ಪ್ರಶಸ್ತಿ ಕೊಡುವಾಗ ನಿಮಗೆ ಯಾಕೆ ನೀಡಬಾರದು. ನೀವು ಭಾರತ ರತ್ನಕ್ಕೆ ಅರ್ಹ ವ್ಯಕ್ತಿ. ನಿಮಗೆ ಸಿಗಲೇಬೇಕು ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.
ರತನ್ ಟಾಟಾ ಸಿಕ್ಕಿದ ಪ್ರಶಸ್ತಿಗಳು
* ಪದ್ಮಭೂಷಣ (ಭಾರತ ಸರ್ಕಾರದ 3ನೇ ಅತ್ಯುನ್ನತ ನಾಗರಿಕ ಗೌರವ (2000)
* ಓರಿಯಂಟಲ್ ರಿಪಬ್ಲಿಕ್ ಆಫ್ ಉರುಗ್ವೆಯ ಪದಕ (ಉರುಗ್ವೆ ಸರ್ಕಾರ (2004)
* ಇಂಟರ್ನ್ಯಾಷನಲ್ ಡಿಸ್ಟಿಂಗ್ವಿಶ್ಡ್ ಅಚೀವ್ಮೆಂಟ್ ಅವಾರ್ಡ್ (2005)
* ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ಗೌರವ ಫೆಲೋಶಿಪ್ (2007)
* ಪದ್ಮವಿಭೂಷಣ (ಭಾರತ ಸರ್ಕಾರದ 2ನೇ ಅತ್ಯುನ್ನತ ನಾಗರಿಕ ಗೌರವ (2008)
* ಇಟಾಲಿಯನ್ ರಿಪಬ್ಲಿಕ್ ಆರ್ಡರ್ ಆಫ್ ಮೆರಿಟ್ನ ‘ಗ್ರ್ಯಾಂಡ್ ಆಫೀಸರ್’ ಪ್ರಶಸ್ತಿ (ಇಟಲಿ ಸರ್ಕಾರ -2009)
* ಗೌರವ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್, ಯುಕೆ (2009)
* ಓಸ್ಲೋ ಬಿಸಿನೆಸ್ ಫಾರ್ ಪೀಸ್ ಅವಾರ್ಡ್ (ಬಿಸಿನೆಸ್ ಫಾರ್ ಪೀಸ್ ಫೌಂಡೇಶನ್ – 2010)