ನಟಿ ರಶ್ಮಿಕಾ ಮಂದಣ್ಣ ಸದಾ ಒಂದಲ್ಲಾ ಒಂದು ಕಾರಣಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೆ ಇರುತ್ತಾರೆ. ಪುಷ್ಪ 2 ಸಕ್ಸಸ್ ಖುಷಿಯಲ್ಲಿರು ನಟಿ ಮತ್ತೆ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಬಾಯ್ತಪ್ಪಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿರುವ ನಟಿ ಬಳಿಕ ಕ್ಷಮೆ ಕೇಳಿದ್ದಾರೆ.
‘ಪುಷ್ಪ 2’ ಸಿನಿಮಾ ಸಕ್ಸಸ್ ಬಳಿಕ ಸಾಲು ಸಾಲು ಸಂದರ್ಶನಗಳಲ್ಲಿ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ನಟನ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ದಳಪತಿ ವಿಜಯ್ ನನ್ನ ನೆಚ್ಚಿನ ನಟ. ಯಾಕಂದ್ರೆ ನಾನು ಚಿತ್ರಮಂದಿರದಲ್ಲಿ ನೋಡಿದ ಮೊದಲ ಸಿನಿಮಾ ‘ಗಿಲ್ಲಿ’ ಆ ಚಿತ್ರದಲ್ಲಿ ಅವರ ನಟನೆ, ಡ್ಯಾನ್ಸ್ ಇಷ್ಟವಾಗಿತ್ತು. ಅಂದಿನಿಂದ ವಿಜಯ್ ಸರ್ ಅಂದ್ರೆ ಇಷ್ಟ ಎಂದಿದ್ದಾರೆ. ‘ಗಿಲ್ಲಿ’ ತೆಲುಗಿನ ‘ಪೋಕಿರಿ’ ರೀಮೆಕ್ ಅಂತ ಇತ್ತೀಚೆಗೆ ಗೊತ್ತಾಯಿತು ಎಂದು ರಶ್ಮಿಕಾ ಹೇಳಿದ್ದಾರೆ. ಇದು ಸಖತ್ ಟ್ರೋಲ್ ಆಗಿದೆ.
ಅಂದಹಾಗೆ ‘ಗಿಲ್ಲಿ’ ತೆಲುಗಿನ ‘ಒಕ್ಕಡು’ ಚಿತ್ರದ ರೀಮೆಕ್. ಮಹೇಶ್ ಬಾಬು ನಟಿಸಿದ ‘ಪೋಕಿರಿ’ ಚಿತ್ರವನ್ನು ಕೂಡ ‘ಪೋಕಿರಿ’ ಹೆಸರಿನಲ್ಲಿ ತಮಿಳಿಗೆ ವಿಜಯ್ ರೀಮೆಕ್ ಮಾಡಿದ್ದರು. ಇದನ್ನೇ ಹೇಳುವ ಭರದಲ್ಲಿ ‘ಪೋಕಿರಿ’ ರೀಮೆಕ್ ‘ಗಿಲ್ಲಿ’ ಎಂದಿದ್ದಾರೆ. ಮಹೇಶ್ ಬಾಬು ಮತ್ತು ವಿಜಯ್ ಇಬ್ಬರ ಜೊತೆಯೂ ನಟಿಸಿದರೂ ಕೂಡ ಸಿನಿಮಾದ ಬಗ್ಗೆ ಜ್ಞಾನ ಇಲ್ವಾ? ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತನ್ನ ಹೇಳಿಕೆಗೆ ಟೀಕೆ, ಟ್ರೋಲ್ ವ್ಯಕ್ತವಾಗುತ್ತಿದ್ದಂತೆ ನಟಿ ಎಚ್ಚೆತ್ತುಕೊಂಡು ಕ್ಷಮೆ ಯಾಚಿಸಿದ್ದಾರೆ. ಹೌದು, ಗೊತ್ತು ನನಗೆ. ಒಂದು ಮಿಸ್ಟೇಕ್ ಆಗಿಬಿಟ್ಟಿದೆ. ಸಂದರ್ಶನ ಮುಗಿದ ಬಳಿಕ ‘ಗಿಲ್ಲಿ’ ಸಿನಿಮಾ `ಒಕ್ಕಡು’ ರೀಮೆಕ್ ಎಂದು ನೆನಪಾಯ್ತು, ಕ್ಷಮಿಸಿ ತಪ್ಪಾಯ್ತು ಎಂದಿದ್ದಾರೆ ರಶ್ಮಿಕಾ ಮಂದಣ್ಣ.