ಚಾಮರಾಜನಗರ:- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಿಗಿದ ಆರೋಪಿಯನ್ನು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಗುರುವಾರ ನಡೆದಿದೆ.
ನಗರದ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಅಪ್ರಾಪ್ತೆಯ ತಾಯಿ ಪಕ್ಕದ ಮನೆಗೆ ಹೋಗಿದ್ದ ವೇಳೆ ಆರೋಪಿಯು ಬಾಲಕಿಯನ್ನು ಮನೆ ಸಮೀಪದ ಗಲ್ಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದು, ಇದನ್ನು ಕಂಡ ಬಾಲಕಿಯ ತಾಯಿ ಕಿರುಚಿಕೊಂಡಿದ್ದು ತಕ್ಷಣವೇ ಆರೋಪಿಯು ಅಪ್ರಾಪ್ತೆಯನ್ನು ಸ್ಥಳದಿಂದ ಓಡಿದ್ದಾನೆ.
ಈ ವೇಳೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದುಕೊಂಡು ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಪಟ್ಟಣ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಅವರು ಮಹಿಳಾ ಠಾಣೆಗೆ ಕಳುಹಿಸಿದ್ದಾರೆ. ಈ ವೇಳೆ ಮಹಿಳಾ ಠಾಣೆಯ ಪೊಲೀಸರು, ಸಾರ್ವಜನಿಕರ ಥಳಿತದಿಂದ ಗಾಯಗೊಂಡಿದ್ದ ಆರೋಪಿಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಇವನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲು ಮಾಡಿಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.
ಅಪ್ರಾಪ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಯ ಮೇಲೆ ಹಿಗ್ಗಾಮುಗ್ಗಾ ಥಳಿಸಿದ್ದು, ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಆರೋಪಿಯು ಥಳಿಸಿದವರ ಮೇಲೆ ಪ್ರತಿ ದೂರು ಸಲ್ಲಿಸಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ವರದಿ: ಪ್ರಮೋದ್ ಚಾಮರಾಜನಗರ