ಬೆಂಗಳೂರು:- ದೂರು ನೀಡಲು ಠಾಣೆಗೆ ಬಂದ ಅಪ್ರಾಪ್ತೆ ವಯಸ್ಸಿನ ಹುಡುಗಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ ಎಂದು ಬೊಮ್ಮನಹಳ್ಳಿ ಠಾಣೆಯ ಕಾನ್ ಸ್ಟೇಬಲ್ ಅರುಣ್ ವಿರುದ್ಧ ಗಂಭೀರ ಆರೋಪ ಬಂದಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು, ಕಾನ್ಸ್ಟೇಬಲ್ ಸೇರಿ ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ತಮಗಾದ ಅನ್ಯಾಯ ಬಗ್ಗೆ ಬಾಲಕಿ ಹಾಗೂ ಬಾಲಕಿ ತಾಯಿ ದೂರು ನೀಡಲು ಠಾಣೆಗೆ ಹೋಗಿದ್ದು, ಬೊಮ್ಮನಹಳ್ಳಿ ಪೋಲಿಸ್ ಠಾಣಾ ಪೇದೆ ಬಾಲಕಿಯ ನಂಬರ್ ಪಡೆದು ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ್ದಾನೆಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳಾದ ಪೇದೆ ಅರುಣ್ ಹಾಗೂ ವಿಕ್ಕಿ ಎಂಬುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಸಂತ್ರಸ್ಥೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಈ ವೇಳೆ ನೆರೆಮನೆ ನಿವಾಸಿ ವಿವಾಹಿತ ವ್ಯಕ್ತಿಯ ಪರಿಚಯವಾಗಿದೆ. ಬಳಿಕ ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಆತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಇದರಿಂದ ನೊಂದ ಅಪ್ರಾಪ್ತೆ, ತಾಯಿ ಬಳಿ ಹೇಳಿಕೊಂಡಿದ್ದಳು. ಈ ಸಂಬಂಧ ಸಂತ್ರಸ್ತೆ ತಾಯಿ ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ, ದೂರು ನೀಡಲು ಬಂದಿದ್ದ ಸಂತ್ರಸ್ತೆಯನ್ನ ಕಾನ್ ಸ್ಟೇಬಲ್ ಅರುಣ್ ಪರಿಚಯಿಸಿ ಕೊಂಡಿದ್ದು, ನ್ಯಾಯಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೇ ಅಲ್ಲದೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ.
ಬಳಿಕ ಕಳೆದ ಡಿಸೆಂಬರ್ ನಲ್ಲಿ ಬಿಟಿಎಂ ಲೇಔಟ್ ಲಾಡ್ಜ್ ಗೆ ಅಪ್ರಾಪ್ತೆ ಕರೆಯಿಸಿಕೊಂಡಿದ್ದ. ಮದ್ಯದ ಬಾಟಲ್ ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಆಕೆ ಮೇಲೆ ಆತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಖಾಸಗಿ ವಿಡಿಯೊಗಳಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಇದಾದ ಬಳಿಕ ಪೇದೆ ಕೆಲಸ ಮಾಡುತ್ತಿದ್ದ ಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ತೆಗೆದುಕೊಳ್ಳದ ಕಾರಣ ನಗರ ಪೋಲಿಸ್ ಆಯುಕ್ತರ ಬಳಿ ಆಕೆ ಪೋಷಕರು ಹೋಗಿದ್ದಾರೆ. ಬಳಿಕ ಕಮಿಷನರ್ ಸಹ ದೂರು ದಾಖಲಿಸಿಕೊಂಡು ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ವಹಿಸಲು ಆದೇಶಿಸಿದ್ದಾರೆ. ನಂತರ ಮೈಕೊ ಲೇಔಟ್ ಠಾಣೆಯಲ್ಲಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಗೆ ಪ್ರಕರಣವನ್ನ ವರ್ಗಾಯಿಸಿದ್ದರು. ಈ ಸಂಬಂಧ ತನಿಖೆ ನಡೆಸಿ ಇಬ್ಬರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.