ಪೋಷಕರ ಲೈಂಗಿಕ ಕ್ರಿಯೆಯ ಬಗ್ಗೆ ಮಾತನಾಡಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಯೂಟ್ಯೂಬರ್ ರಣ್ವೀರ್ ಅಲ್ಹಾಬಾದಿಯಾ, ಸಮಯ್ ರೈನಾ ಇದೀಗ ಕೊಂಚ ನಿರಾಳರಾಗಿದ್ದಾರೆ. ರಣ್ವೀರ್ ಅಲ್ಹಾಬಾದಿಯಾಗೆ ಬಂಧನದ ಭೀತಿ ಎದುರಾಗಿತ್ತು. ಆದರೆ ಸುಪ್ರೀಂಕೋರ್ಟ್ ರಣ್ವೀರ್ಗೆ ಬಂಧನ ಭೀತಿಯಿಂದ ನಿರಾಳತೆ ಒದಗಿಸಿದೆ.
ಕಳೆದ ವಾರ ‘ಇಂಡಿಯಾ ಗಾಟ್ ಲೇಟೆಂಟ್’ ಶೋನಲ್ಲಿ ನೀಡಿದ್ದ ಅಶ್ಲೀಲ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಪೋಷಕರು ಮತ್ತು ಲೈಂಗಿಕತೆ ಬಗ್ಗೆ ರಣ್ವೀರ್ ಅಲ್ಹಾಬಾದಿಯಾ ಆ ಶೋನಲ್ಲಿ ಮಾತನಾಡಿದ್ದರು. ಇದರಿಂದಾಗಿ ರಣ್ವೀರ್, ಸಮಯ್ ರೈನಾ ಸೇರಿದಂತೆ ಆ ಶೋನ ಅಂದಿನ ಪ್ಯಾನಲ್ನಲ್ಲಿ ಇದ್ದ ಹಲವರ ಮೇಲೆ ದೂರು ದಾಖಲಾಗಿತ್ತು.
ರಣ್ವೀರ್ ಅಲ್ಹಾಬಾದಿಯಾರ ವಕೀಲರ ವಾದ ಆಲಿಸಿದ ಸುಪ್ರೀಂಕೋರ್ಟ್, ರಣ್ವೀರ್ ಅನ್ನು ಬಂಧಿಸದಿರುವಂತೆ ಸೂಚಿಸಿದೆ. ಆದರೆ ರಣ್ವೀರ್, ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಿದರೆ ಮಾತ್ರವೇ ಅವರನ್ನು ಬಂಧಿಸುವಂತಿಲ್ಲ ಎಂದಿದೆ. ಅಸ್ಸಾಂ, ಮುಂಬೈ ಪೊಲೀಸರು ರಣ್ವೀರ್ ಅನ್ನು ಬಂಧಿಸುವಂತಿಲ್ಲ ಎಂದಿರುವ ಸುಪ್ರೀಂ ನ್ಯಾಯಮೂರ್ತಿಗಳು, ಒಂದೊಮ್ಮೆ ಇದೇ ವಿಷಯದ ಮೇಲೆ ಇನ್ನೊಂದು ಪ್ರಕರಣ ದಾಖಲಾದರೂ ಸಹ ರಣ್ವೀರ್ ಅನ್ನು ಬಂಧಿಸುವಂತಿಲ್ಲ ಎಂದಿದೆ.
ಆದರೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ರಣ್ವೀರ್ ಹೇಳಿಕೆಯನ್ನು ತೀವ್ರವಾಗಿ ಟೀಕೆ ಮಾಡಿದ್ದಾರೆ. ‘ನೀನು ಜನಪ್ರಿಯ ಎಂದ ಮಾತ್ರಕ್ಕೆ ಈ ಸಮಾಜವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ತೋಚಿದ್ದೆಲ್ಲವನ್ನೂ ಹೇಳಬಹುದಾ? ’ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ‘ಇದು ಅಶ್ಲೀಲ ಅಲ್ಲದೇ ಹೋದರೆ ಈ ದೇಶದಲ್ಲಿ ಇನ್ನು ಯಾವುದು ಅಶ್ಲೀಲ?’ ಎಂದು ಸಹ ಸಿಟ್ಟಿನಿಂದ ಪ್ರಶ್ನೆ ಮಾಡಿದ್ದಾರೆ. ಈ ವ್ಯಕ್ತಿ ಅವರ ಪೋಷಕರಿಗೆ ಎಂಥಹಾ ದೊಡ್ಡ ಮುಜುಗರ ತಂದಿದ್ದಾನೆ, ಆ ವ್ಯಕ್ತಿಯ ಒಳಗೆ ಇದ್ದ ಅಶ್ಲೀಲತೆ, ದುಷ್ಟತನ ಈ ಹೇಳಿಕೆ ಮೂಲಕ ಹೊರಗೆ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಣ್ವೀರ್ರ ವಕೀಲರು ಸಹ ತಮ್ಮ ಕಕ್ಷಿಧಾರರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಆತ ನೀಡಿರುವ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆದರೆ ಆ ಹೇಳಿಕೆ ಕ್ರಿಮಿನಲ್ ಅಪರಾಧದ ಅಡಿಗೆ ಒಳಪಡುತ್ತದೆಯೇ ಎಂಬುದನ್ನು ನಾವು ನೋಡಬೇಕಿದೆ’ ಎಂದಿದ್ದಾರೆ. ರಣ್ವೀರ್ಗೆ ಬಂಧನ ಭೀತಿ ತಪ್ಪಿದ ಬೆನ್ನಲ್ಲೆ ಅದೇ ಪ್ರಕರಣದ ಮತ್ತೊಬ್ಬ ಆರೋಪಿ ಸಮಯ್ ರೈನಾಗೂ ಬಂಧನ ಭೀತಿಯಿಂದ ಮುಕ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ.