ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ರಣಜಿ ಟ್ರೋಫಿಯಲ್ಲಿ ಅದ್ಭುತ ಪುನರಾಗಮನ ಮಾಡಿದ್ದಾರೆ. 2024-25ರ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸುತ್ತಿರುವ ಜಡೇಜಾ, ದೆಹಲಿ ವಿರುದ್ಧದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಸಹಿತ ಒಟ್ಟು 12 ವಿಕೆಟ್ ಕಬಳಿಸಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದ ಜಡ್ಡು, ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ಮಿಂಚಿದರು.
IPL 2025: ಸ್ಪಿನ್ ಎದುರು ಪ್ಲಾಫ್: RCB ನಿದ್ದೆಗೆಡಿಸಿದ ಇಂಗ್ಲೆಂಡ್ ಪ್ಲೇಯರ್ಸ್!
ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ.
ರಣಜಿ ಆಡುತ್ತಿರುವ ಟೀಮ್ ಇಂಡಿಯಾ ಆಟಗಾರರಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಮಿಂಚಿನ ದಾಳಿ ನಡೆಸಿದ್ದಾರೆ. ಸೌರಾಷ್ಟ್ರ ಪರ ಆಡುತ್ತಿರುವ ರವೀಂದ್ರ ಜಡೇಜಾ ಡೆಲ್ಲಿ ವಿರುದ್ಧದ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಜಡೇಜಾ ಡೆಲ್ಲಿ ವಿರುದ್ಧ 17.4 ಓವರ್ ಬೌಲ್ ಮಾಡಿ ಕೇವಲ 66 ರನ್ ನೀಡಿ ಐದು ವಿಕೆಟ್ ಪಡೆದರು.
ಜಡೇಜಾ ಡೆಲ್ಲಿ ಮೇಲೆ ಎಂತಹ ಒತ್ತಡವನ್ನು ಸೃಷ್ಟಿಸಿದರು ಎಂದರೆ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 188 ರನ್ ಗಳಿಸಲಷ್ಟೇ ಶಕ್ತವಾಯಿತು. ರಿಷಬ್ ಪಂತ್ ಕೂಡ ಡೆಲ್ಲಿ ತಂಡದಲ್ಲಿ ಆಡುತ್ತಿದ್ದರು ಆದರೆ ಅವರ ಉಪಸ್ಥಿತಿಯು ಈ ತಂಡಕ್ಕೆ ಹೆಚ್ಚು ನೆರವಾಗಲಿಲ್ಲ ಎಂಬುದು ದೊಡ್ಡ ವಿಷಯ. 10 ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ರಿಷಬ್ ಪಂತ್ ಔಟಾದರು.
ರವೀಂದ್ರ ಜಡೇಜಾ ತಮ್ಮ ಮೊದಲ ಬೇಟೆಯಾಗಿ ಸನತ್ ಸಂಗ್ವಾನ್ ಅವರನ್ನು ಬಲಿ ಪಡೆದರೆ, ಇದಾದ ಬಳಿಕ 44 ರನ್ ಗಳಿಸಿ ಕ್ರೀಸ್ನಲ್ಲಿದ್ದ ಯಶ್ ಧುಲ್ ಅವರ ವಿಕೆಟ್ ಕೂಡ ಪಡೆದರು. ಮೂರನೇ ವಿಕೆಟ್ ಆಗಿ ಜಡೇಜಾ ಡೆಲ್ಲಿ ನಾಯಕ ಆಯುಷ್ ಬಧೋನಿಯನ್ನೂ ಬಲಿಪಶು ಮಾಡಿದರು. ಆ ನಂತರವೂ ಮ್ಯಾಜಿಕ್ ಮಾಡಿದ ಜಡೇಜಾ, ಹರ್ಷ್ ತ್ಯಾಗಿ ಮತ್ತು ನವದೀಪ್ ಸೈನಿ ಅವರ ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು ಮತ್ತು ಆ ಮೂಲಕ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 35 ನೇ ಬಾರಿಗೆ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳನ್ನು ಪಡೆದ ಸಾಧನೆಯನ್ನು ಸಾಧಿಸಿದರು.
ರಣಜಿ ಪಂದ್ಯದ 6ನೇ ಸುತ್ತಿನ ಪಂದ್ಯದಲ್ಲಿ ಸೌರಾಷ್ಟ್ರ- ದೆಹಲಿ ತಂಡಗಳು ಮುಖಾಮುಖಿಯಾಗಿದ್ದರು. ಈ ಪಂದ್ಯದಲ್ಲಿ ಸೌರಾಷ್ಟ್ರ ದೆಹಲಿ ವಿರುದ್ಧ 10 ವಿಕೆಟ್ಗಳ ಜಯ ಸಾಧಿಸಿತು. ಈ ಪಂದ್ಯ ಕೇವಲ ಎರಡೇ ದಿನಗಳಲ್ಲಿ ಕೊನೆಗೊಂಡಿತು. ಡೆಲ್ಲಿ ನೀಡಿದ್ದ 15 ರನ್ ಗಳ ಗುರಿಯನ್ನು ಸೌರಾಷ್ಟ್ರ ವಿಕೆಟ್ ನಷ್ಟವಿಲ್ಲದೆ ತಲುಪಿತು. ಆರಂಭಿಕರಾದ ಹಾರ್ವಿಕ್ ದೇಸಾಯಿ (6) ಮತ್ತು ಅರ್ಪಿತ್ ರಾಣಾ (4) ಅಜೇಯರಾಗಿ ಪಂದ್ಯವನ್ನು ಮುಗಿಸಿದರು.
ಇದಕ್ಕೂ ಮೊದಲು, 163/5 ರಾತ್ರಿ ಸ್ಕೋರ್ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಸೌರಾಷ್ಟ್ರ, ತನ್ನ ಮೊದಲ ಇನ್ನಿಂಗ್ಸ್ನಲ್ಲಿ 271 ರನ್ಗಳಿಗೆ ಆಲೌಟ್ ಆಗಿತ್ತು. ಇದರಿಂದಾಗಿ ಸೌರಾಷ್ಟ್ರ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 83 ರನ್ ಗಳ ಮುನ್ನಡೆ ಸಿಕ್ಕಿತು. ಸೌರಾಷ್ಟ್ರ ತಂಡದ ಪರ ಹಾರ್ವಿಕ್ ದೇಸಾಯಿ (93) ಗರಿಷ್ಠ ಸ್ಕೋರರ್ ಆಗಿದ್ದರೆ, ಅರ್ಪಿತ್ ವಾಸವದಾ (62) ಮತ್ತು ಜಡೇಜಾ (38) ರನ್ ಗಳಿಸುವ ಮೂಲಕ ಮಿಂಚಿದ್ದರು.
ವಾಸ್ತವವಾಗಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಜಡೇಜಾರನ್ನು ಹೊರತುಪಡಿಸಿ ಮಿಕ್ಕವರ್ಯಾರು ಉತ್ತಮ ಪ್ರದರ್ಶನ ನೀಡಿಲ್ಲ ಎನ್ನಲಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಅನುಭವಿಸಿದ ನಂತರ ಬಿಸಿಸಿಐ ಎಚ್ಚರಿಕೆ ಮೇರೆಗೆ ರಣಜಿ ಟ್ರೋಫಿ ಆಡುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೊದಲ ದಿನವೇ ನಿರಾಶೆ ಮೂಡಿಸಿದ್ದಾರೆ. ರೋಹಿತ್, ಪಂತ್, ಗಿಲ್ ಹಾಗೂ ಜೈಸ್ವಾಲ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.