‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಪ್ರಮೋಷನ್ನಲ್ಲಿ ನಟ ರಣದೀಪ್ ಹೂಡಾ ಬ್ಯುಸಿ ಆಗಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವಿನಾಯಕ್ ದಾಮೋದರ್ ಸಾವರ್ಕರ್ಅವರ ಬದುಕಿನ ವಿವರವನ್ನು ಆಧರಿಸಿ ತಯಾರಾದ ಸಿನಿಮಾ. ಸಿನಿಮಾದಲ್ಲಿ ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ ಕಾಣಿಸಿಕೊಂಡಿದ್ದು, ಪಾತ್ರದ ಮೇಲಿನ ಗೌರವ ಹಾಗೂ ಬದ್ಧತೆಗಾಗಿ ರಣದೀಪ್ ಹೂಡಾ ಅಚ್ಚರಿಯ ರೀತಿಯಲ್ಲಿ ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದಾರೆ.
‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾ ಮಾರ್ಚ್ 22ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಇರುವಾಗ ರಣದೀಪ್ ಹೂಡಾ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಹೂಡಾ ಹಂಚಿಕೊಂಡಿರುವ ಫೋಟೋದಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.
ಕಟ್ಟುಮಸ್ತಾದ ಬಾಡಿ ಹೊಂದಿದ್ದ ರಣದೀಪ್ ಹೂಡಾ ಅವರು ಸಾವರ್ಕರ್ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಅಂದಾಜು 30 ಕೆಜಿ ದೇಹದ ತೂಕವನ್ನು ಅವರು ಕಡಿಮೆ ಮಾಡಿಕೊಂಡಿದ್ದು, ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಬದಲಾಗಿದ್ದಾರೆ. ಇವರಿಗೆ ಸಿನಿಮಾದ ಮೇಲಿನ ಪ್ರೀತಿ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ರಣದೀಪ್ ಹೂಡಾ ನಟನೆಯ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರ ಮಾರ್ಚ್ 22ರಂದು ತೆರೆಗೆ ಬರ್ತಿದ್ದು ನಟಿ ಅಂಕಿತಾ ಲೋಖಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಜೊತೆಗೆ ಮರಾಠಿ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್ ತಿಲಕ್, ಡಾ. ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಜವಹರ್ ಲಾಲ್ ನೆಹರು, ಮದನ್ ಲಾಲ್ ಧಿಂಗ್ರ, ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದಲ್ಲಿ ತೋರಿಸಲಾಗಿದೆ.