ಮುಂಬೈ:- ಮುಂಬೈನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಯೊಂದು ಜರುಗಿದೆ.
ಬಲಿ ನೀಡಲು ಮಾರಾಟಕ್ಕಿಟ್ಟಿದ್ದ ಕುರಿಯ ಮೇಲೆ “ರಾಮ” ಎಂದು ಬರೆದಿರುವ ವಿಡಿಯೋ ವೈರಲ್ ಆಗಿದೆ.
ಘಟನೆಯು ನವಿ ಮುಂಬೈ ಪ್ರದೇಶದ ಬೆಲಾಪುರದ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ನಲ್ಲಿ “ಗುಡ್ಲಕ್ ಕುರಿ ಮಾಂಸದ ಅಂಗಡಿ”ಯಲ್ಲಿ ನಡೆದಿದೆ. ಈ ಮಟನ್ ಅಂಗಡಿಯ ಮಾಲೀಕ ಮಹಮ್ಮದ್ ಶಾಫಿ ತಮ್ಮ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಬಿಳಿ ಕುರಿಯ ಮೇಲೆ ಹಳದಿ ಬಣ್ಣದಲ್ಲಿ ರಾಮ ಎಂದು ಬರೆದಿದ್ದರು. ಜೂನ್ 15 ರಂದು ಹಿಂದೂ ಸಂಘಟನೆಯ ಕೆಲವರು ಅಲ್ಲಿಗೆ ಆಗಮಿಸಿ ಅದನ್ನು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ರೀತಿ ರಾಮನ ಹೆಸರನ್ನು ಬರೆದು ಕುರಿಯನ್ನು ಬಲಿ ನೀಡುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕುತ್ತಿದೆ ಎಂದು ಆರೋಪಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ನಂತರ ಪೊಲೀಸ್ ಅಧಿಕಾರಿಗಳು ಆ ಕುರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಿಕ ಮಟನ್ ಅಂಗಡಿಯ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.