ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇಂದು ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಕಾಲಿಲೆಯಿಂದ ಬಳಲುತ್ತಿದ್ದ ಎಸ್ ಎಂ ಕೃಷ್ಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಹಳೆಯ ದಿನಗಳನ್ನು ಸ್ಮರಿಸಿದ್ದು ಡಾ. ರಾಜ್ಕುಮಾರ್ ಜೀವಂತವಾಗಿ ಮನೆಗೆ ಬರಲು ಎಸ್.ಎಂ. ಕೃಷ್ಣ ಕಾರಣ ಎಂದಿದ್ದಾರೆ.
ಒಂದು ತಿಂಗಳ ಹಿಂದೆ ಎಸ್.ಎಂ. ಕೃಷ್ಣ ಅವರ ಮನೆಗೆ ಹೋಗಿದ್ದೆ, ಒಂದು ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲು ಆಗ ಅವರ ಸ್ಥಿತಿ ನೋಡಿ ಬೇಸರವಾಯಿತು. ನಾನು ಆ ದೇವರಲ್ಲಿ ಕೇಳಿಕೊಂಡಿದ್ದೆ, ದೇವರೆ ಅವರಿಗೆ ಹಿಂಸೆ ಕೊಡಬೇಡ ಆದಷ್ಟು ಬೇಗ ಕರೆದುಕೊಂಡು ಬಿಡು ಎಂದು ಕೋರಿಕೊಂಡಿದ್ದೆ ಎಂದರು. ಇಂತಹ ರಾಜಕಾರಣಿ ಸಿಗೋದು ಅಪರೂಪ. ಅವರು ತುಂಬಾ ಶಿಸ್ತು ಅನ್ನು ಪಾಲಿಸುತ್ತಿದ್ದರು. ಅದರಿಂದಲೇ ಕೇಂದ್ರದಲ್ಲಿ ವಿದೇಶಾಂಗ ಸಚಿವರಾದರು.
ಡಾ.ರಾಜ್ಕುಮಾರ್ರನ್ನು ವೀರಪ್ಪನ್ ಅಪಹರಣ ಮಾಡಿದ ಸಂದರ್ಭದಲ್ಲಿ ಅವರು ಪಟ್ಟಂತಹ ಕಷ್ಟ ತುಂಬಾ ಹತ್ತಿರದಿಂದ ನೋಡಿದ್ದೇನೆ. ಆ ಸಂದರ್ಭದಲ್ಲಿ ಎಲ್ಲರೂ ಶಾಂತಿಯಿಂದ ಇದ್ರೆ ಅಣ್ಣಾವ್ರು ವಾಪಸ್ ಬರುತ್ತಾರೆ ಎಂದು ಪಾರ್ವತಮ್ಮ ಹೇಳಿದ್ದರು. ಎಸ್.ಎಂ. ಕೃಷ್ಣ ಅವರು ಅಂದು ಸಿಎಂ ಆಗಿದ್ದಕ್ಕೆನೇ ರಾಜ್ಕುಮಾರ್ ಅವರು ಜೀವಂತ ಮನೆಗೆ ಬಂದರು. ರಾಜ್ಕುಮಾರ್ಗೆ ಮರುಜೀವ ತಂದು ಕೊಟ್ಟಿದ್ದು ಎಸ್.ಎಂ. ಕೃಷ್ಣ ಎಂದು ಸಾರಾ ಗೋವಿಂದ್ ಹೇಳಿದರು.
ಇಂತಹ ವ್ಯಕ್ತಿಯನ್ನು ರಾಜಕಾರಣದಲ್ಲಿ ಮತ್ತೆ ನೋಡೋಕೆ ಆಗಲ್ಲ. ಅಂದು ಅಪಹರಣದಿಂದ ಮುಕ್ತರಾದ್ಮೇಲೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅಣ್ಣಾವ್ರಿಗೆ ಅಭಿನಂದನಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವು. ಆ ಸಂದರ್ಭದಲ್ಲಿ ಎಸ್.ಎಂ ಕೃಷ್ಣಗೆ ಆಹ್ವಾನ ನೀಡಿದ್ದೇವು. ಅಂದು ಅವರ ಮನಸ್ಸಿಗೆ ಏನೋ ಬೇಸರ ಆಗಿತ್ತು ಅಂತ ಕಾಣುತ್ತೆ ಅವರು ಬರಲ್ಲ ಅಂದ್ರು. ನೀವು ಬರಲಿಲ್ಲ ಅಂದರೆ ಕಾರ್ಯಕ್ರಮ ರದ್ದು ಮಾಡುತ್ತೇವೆ ಎಂದು ಹೇಳಿದಾಗ ನಮ್ಮ ಮಾತಿಗೆ ಸ್ಪಂದಿಸಿ ಬಂದರು. ಅಪಹರಣದ ಸಂದರ್ಭದಲ್ಲಿ ಅಣ್ಣಾವ್ರ ಮಕ್ಕಳು ಮತ್ತು ನಾವೆಲ್ಲರೂ ಎಸ್.ಎಂ. ಕೃಷ್ಣರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವು. ಅಣ್ಣಾವ್ರರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಹೊಣೆ ನಮ್ಮದು ಎಂದರು. ಅವರು ಆಡಿದ ಮಾತಿನಂತೆ ಅಣ್ಣಾವ್ರರನ್ನು ಕರೆದುಕೊಂಡು ಬಂದರು. ಎಸ್.ಎಂ. ಕೃಷ್ಣ ಅವರು ಸರಳ ವ್ಯಕ್ತಿ, ಇಂದು ಅವರು ನಮ್ಮೊಂದಿಗೆ ಇಲ್ಲದೆ ಇರೋದು ಬೇಸರವಿದೆ. ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಸಾರಾ ಗೋವಿಂದು ಮಾತನಾಡಿದರು.