ಚೆನ್ನೈ ಚಂಡಮಾರುತದಿಂದ ತತ್ತರಿಸಿದ ಕಾರಣದಿಂದಾಗಿ ರಜನಿಕಾಂತ್ ಇಂದು ಅದ್ಧೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳು ಮತ್ತು ನಿರ್ಮಾಪಕರು ಸುಮ್ಮನೆ ಕೂತಿಲ್ಲ. ತಮ್ಮ ಪಾಡಿಗೆ ತಾವು ತಲೈವಾ ಹುಟ್ಟು ಹಬ್ಬವನ್ನು ಸಡಗರದಿಂದಲೇ ಆಚರಿಸುತ್ತಿದ್ದಾರೆ. ಇಂದು ರಜನಿ ಅವರ 170ನೇ (Thalaiva 170) ಸಿನಿಮಾದ ಟೈಟಲ್ (Title) ಮತ್ತು ಟೀಸರ್ (Teaser) ರಿಲೀಸ್ ಆಗಲಿದ್ದು, ಅದಕ್ಕಾಗಿ ರಜನಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂಜೆ 5 ಗಂಟೆಗೆ ಚಿತ್ರದ ಟೈಟಲ್ ರಿವಿಲ್ ಆಗಲಿದೆ.
ಹಲವು ದಿನಗಳಿಂದ ರಜನಿ ನಟನೆಯ 170ನೇ ಸಿನಿಮಾ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆಯು ಒಂದೊಂದು ಮಾಹಿತಿಯನ್ನು ಹೊರ ಹಾಕುತ್ತಿದೆ. ಜೊತೆಗೆ ಕೆಲ ದಿನಗಳ ಹಿಂದೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ. ಜೊತೆಗೆ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಎನ್ನುವ ವಿಷಯವನ್ನು ಸಂಸ್ಥೆ ಹೇಳಿಕೊಂಡಿದೆ.
ರಜನಿಕಾಂತ್ ಮತ್ತು ಅಮಿತಾಭ್ ಕಾಂಬಿನೇಷನ್ ನ ಈ ಚಿತ್ರದಲ್ಲಿ ದುಶಾರ ವಿಜಯನ್ (Dushara Vijayan) ಮತ್ತು ಮಂಜು ವಾರಿಯರ್ (Manju Warrier) ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ದುಶಾರ ಈಗಾಗಲೇ ಬೋಧೈ ಯೇರಿ ಬುಧಿ ಮಾರಿ, ಅನೀತಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಂಜು ವಾರಿಯರ್ ಲೂಸಿಫರ್, ಅಸುರನ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.
ಬರೋಬ್ಬರಿ 32 ವರ್ಷಗಳ ಬಳಿಕ ಭಾರತೀಯ ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಇದು ನಿಜನಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಕೊನೆಗೂ ಅದು ನಿಜವಾಗಿತ್ತು. ಮೂರು ದಶಕದ ಬಳಿಕ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ ಒಟ್ಟಾಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.