ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ರಜತ್ ವರ್ತನೆ ಹಲವರಿಗೆ ಬೇಸರ ಮೂಡಿಸಿದೆ. ಪ್ರತಿಭಾರಿ ಒಂದಲ್ಲ ಒಂದು ಕಾರಣಕ್ಕೆ ಸ್ಪರ್ಧಿಗಳಿಗೆ ಅವಾಚ್ಯ ಪದಗಳನ್ನು ಬಳಸಿ ಕಿರಿಕ್ ಮಾಡಿಕೊಳ್ಳುವ ರಜತ್ ಈ ಬಾರಿ ಗೌತಮಿ ಬಗ್ಗೆ ಮಾತನಾಡಿದ್ದಾರೆ. ಮಾತಿನ ಭರದಲ್ಲಿ ಗೌತಮಿ ಅಪ್ಪ-ಅಮ್ಮನ ವಿಚಾರವನ್ನೆಲ್ಲ ಪ್ರಸ್ತಾಪಿಸಲು ಶುರು ಮಾಡಿದ್ದು ಇದರಿಂದಾಗಿ ಗೌತಮಿ ಕೆಂಡಾಮಂಡಲರಾಗಿದ್ದಾರೆ. ರಜತ್ ಮಾತುಗಳನ್ನು ಉಗ್ರಂ ಮಂಜು ಖಂಡಿಸಿದ್ದಾರೆ.
ಬಿಗ್ ಬಾಸ್ ನ ಇಡೀ ಮನೆಯಲ್ಲಿ ಕ್ಲೀನ್ ಮಾಡುವ ಟಾಸ್ಕ್ ಸ್ಪರ್ಧಿಗಳಿಗೆ ನೀಡಲಾಗಿತ್ತು. ಈ ಟಾಸ್ಕ್ ನಿಭಾಯಿಸುವ ವೇಳೆ ಗೌತಮಿ ಜಾದವ್ ಮತ್ತು ರಜತ್ ನಡುವೆ ಜಗಳ ಆರಂಭಆಗಿದೆ. ಕೆಲಸದ ವಿಚಾರ ಬಂದಾಗ ರಜತ್ ಯಾವಾಗಲೂ ಸೋಮಾರಿತನ ಪ್ರದರ್ಶಿಸುತ್ತಾರೆ. ಕೆಲಸ ಮಾಡಲು ಹಿಂದೇಟು ಹಾಕಿದ ರಜತ್ ಗೆ ‘ಸುಮ್ಮನೆ ಕುಳಿತುಕೊಂಡು ಹಣ್ಣು ತಿನ್ನಿ’ ಎಂದು ಗೌತಮಿ ಜಾದವ್ ತಿರುಗೇಟು ನೀಡಿದರು. ಅಲ್ಲಿಂದ ಮಾತಿನ ಚಕಮಕಿ ಆರಂಭ ಆಗಿದೆ.
ತಾವು ಹಣ್ಣು ತಿನ್ನುವುದನ್ನು ಗೌತಮಿ ಜಾದವ್ ಟೀಕಿಸಿದ್ದಕ್ಕೆ ರಜತ್ ಅವರಿಗೆ ವಿಪರೀತ ಕೋಪ ಬಂತು. ಆಗ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಇಷ್ಟು ದಿನ ಪಾಸಿಟಿವ್ ಮಂತ್ರ ಜಪಿಸುತ್ತಿದ್ದ ಗೌತಮಿ ಜಾದವ್ ಅವರು ರಜತ್ಗೆ ಏಕವಚನದಲ್ಲಿ ಬೈಯ್ಯುವ ಮಟ್ಟಕ್ಕೆ ಬದಲಾದರು. ‘ಇವರ ಅಪ್ಪನ ಮನೆಯಿಂದ ತಂದವಳ ರೀತಿ ಹೇಳುತ್ತಾಳೆ’ ಎಂದು ರಜತ್ ಅವರು ಬಾಯಿಗೆ ಬಂದಂತೆ ಮಾತನಾಡಿ ಗದ್ದಲ ಎಬ್ಬಿಸಿದರು.
ಮನೆ ಕ್ಲೀನ್ ಮಾಡುವ ಟಾಸ್ಕ್ ಮುಗಿದ ಬಳಿಕ ಬಿಗ್ ಬಾಸ್ ಕಡೆಯಿಂದ ದಿನಸಿ ವಸ್ತುಗಳು ಬಂದವು. ಅದನ್ನು ನೋಡುತ್ತ ಇರುವಾಗ ‘ಇದು ಬಿಗ್ ಬಾಸ್ ಕಳಿಸಿದ್ದು ತಾನೆ? ಯಾರಾದರೂ ಅಪ್ಪನ ಮನೆಯಿಂದ ತಂದಿದ್ದೀರಾ’ ಎಂದು ರಜತ್ ಮತ್ತೊಮ್ಮೆ ಗೌತಮಿಯನ್ನು ಕೆಣಕಿದರು. ‘ಅಮ್ಮ ಅಮ್ಮನ ವಿಷಯಕ್ಕೆ ಬಂದರೆ ಸರಿ ಇರುವುದಿಲ್ಲ’ ಎಂದು ಗೌತಮಿ ಅವರು ರಜತ್ಗೆ ವಾರ್ನಿಂಗ್ ನೀಡಿದ್ದಾರೆ.