ಬೆಂಗಳೂರು:- ವಿಜಯದ ನಿರೀಕ್ಷೆಯಲ್ಲಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ಲಭಿಸಿದ್ದು, ರಾಜ್ಯದಲ್ಲಿ ರಾಜಾಹುಲಿ ಪ್ರಭಾವ ಮಾತ್ರ ತಗ್ಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ವಿಜಯ ಸಾಧಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ಆ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ನೇಮಕವನ್ನು ಪ್ರಮುಖ ದಾಳವಾಗಿ ಪ್ರಯೋಗಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಈಗಾಗಲೇ ನಾನಾ ಪಟ್ಟುಗಳನ್ನು ಹಾಕುತ್ತಿರುವ ಕಮಲಪಡೆ, ಅದರ ಮೊದಲ ಹಂತವಾಗಿ ವಿಜಯೇಂದ್ರಗೆ ರಾಜ್ಯಾಧ್ಯಕ್ಷರ ಪಟ್ಟ ನೀಡಿದೆ ಎನ್ನಲಾಗಿದೆ.
ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಜಯ ಗಳಿಸಲು ಸಾಧ್ಯವಾಗದಿರುವುದು ಹಾಗೂ ರಾಜ್ಯದಲ್ಲಿ ಅಧಿಕಾರ ತಪ್ಪಿ ಹೋಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು.
ಅವೆಲ್ಲ ನಕಾರಾತ್ಮಕ ಸಂಗತಿಗಳನ್ನು ಮರೆಮಾಚುವ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ಭರ್ಜರಿ ವಿಜಯದ ನಿರೀಕ್ಷೆಯಲ್ಲಿರುವ ಬಿಜೆಪಿ ಅದನ್ನು ವಿಜಯೇಂದ್ರ ಮೂಲಕ ಸಾಧಿಸಲು ತಂತ್ರ ಹೂಡಿದೆ.
ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿಸಿದ ಬೆನ್ನಿಗೇ ರಾಜ್ಯ ಬಿಜೆಪಿಯಲ್ಲಿ ಒಂದು ಆಂತರಿಕ ಅಸಮಾಧಾನ ಹೊಗೆಯಾಡಲು ಆರಂಭಿಸಿತ್ತು.
ಮಾತ್ರವಲ್ಲ, ರಾಜ್ಯ ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹಿಡಿತ ಸಡಿಲಗೊಂಡಿದೆ ಎಂಬಂತಹ ಅಭಿಪ್ರಾಯ ಹರಿದಾಡಲಾರಂಭಿಸಿತ್ತು. ಆದರೆ ಇದೀಗ ಅವರ ಪುತ್ರ ವಿಜಯೇಂದ್ರ ಅವರಿಗೇ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿರುವುದು ರಾಜ್ಯದಲ್ಲಿ ರಾಜಾಹುಲಿ ಪ್ರಭಾವ ತಗ್ಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ