ರುಧೀರಂ ಸಿನಿಮಾ ಮೂಲಕ ಈಗಾಗಲೇ ಮಲಯಾಳಂ (Malayalam) ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಕನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಇದೀಗ ಮತ್ತೊಂದು ಮಲಯಾಳಂ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸ್ಟಾರ್ ನಟ ಮಮ್ಮಟ್ಟಿ (Mammootty) ನಾಯಕನಾಗಿ ನಟಿಸುತ್ತಿರುವ ಟರ್ಬೋ (Turbo) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಸ್ವತಃ ಚಿತ್ರತಂಡವೇ ಈ ಮಾಹಿತಿಯನ್ನು ಹೊರ ಹಾಕಿದೆ.
ಒಂದು ಕಡೆ ಎರಡೆರಡು ಮಲೆಯಾಳಂ ಸಿನಿಮಾದಲ್ಲಿ ರಾಜ್ ನಟಿಸುತ್ತಿದ್ದರೆ, ಮತ್ತೊಂದು ಕಡೆ ಮಲಯಾಳಂ ಸಿನಿಮಾವೊಂದನ್ನು ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿಯೂ ಸಿಕ್ಕಿದೆ. ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ.
ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.
ರಾಜ್ ಬಿ ಶೆಟ್ಟಿ (Raj B Shetty)ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.