ಕೊಪ್ಪಳ:- ಗಂಗಾವತಿ ತಾಲೂಕಿನ ಜಬ್ಬಲಗುಡ್ಡ, ಹೇಮಗುಡ್ಡ, ಮುಕ್ಕುಂಪಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರ ಸ್ಥಿತಿ ಹೇಳತೀರದಾಗಿದೆ. ಹಿಂಗಾರು ಮಳೆಯ ಆರ್ಭಟ ಇವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಜಿಲ್ಲೆಯಲ್ಲಿ ಹಿಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ ಎರಡ್ಮೂರು ದಿನಗಳದಿಂದ ಜಿಲ್ಲೆಯ ಹಲವಡೆ ಪ್ರತಿನಿತ್ಯ ಮಳೆಯಾಗುತ್ತಿದೆ. ಆದರೆ ಮಳೆಯಾದರೆ ಸಂತಸ ಪಡುವ ರೈತರು, ಇದೀಗ ಸ್ವಲ್ಪ ದಿನ ಮೋಡಗಳೆ, ಇಲ್ಲಿ ನಿಂತು ಮಳೆ ಸುರಿಸದೇ, ಸ್ವಲ್ಪ ಮುಂದೆ ಹೋಗಿ ಅಂತ ಹೇಳುತ್ತಿದ್ದಾರೆ. ಯಾಕಂದ್ರೆ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಮಕ್ಕೆಜೋಳವನ್ನು ಬೆಳೆಯುತ್ತಾರೆ. ಅದರಲ್ಲೂ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಯಲಬುರ್ಗಾ, ಕುಷ್ಟಗಿ ತಾಲೂಕಿನ ಹೆಚ್ಚಿನ ರೈತರು ತಮ್ಮ ಮೊದಲ ಬೆಳೆಯನ್ನಾಗಿ ಮೆಕ್ಕೆಜೋಳವನ್ನು ಬೆಳೆಯುತ್ತಾರೆ. ಕಳೆದ ಮೂರ್ನಾಲ್ಕು ತಿಂಗಳ ಕಾಲ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳದಿರೋ ರೈತರಿಗೆ, ಈ ಬಾರಿ ಭೂಮಿ ತಾಯಿ ಉತ್ತಮ ಫಲವನ್ನೇ ನೀಡಿದ್ದಾಳೆ.
ಅದೃಷ್ಟವೆನ್ನುವಂತೆ ಮಾರುಕಟ್ಟೆಯಲ್ಲಿ ಕೂಡ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಎರಡು ಸಾವಿರದ ಐನೂರು ರೂಪಾಯಿವರಗೆ ಬೆಲೆಯಿದೆ. ಉತ್ತಮ ಬೆಲೆ ಇರೋದರಿಂದ ರೈತರು ಮೆಕ್ಕೆಜೋಳವನ್ನು ಕಟಾವು ಮಾಡಿ, ರಾಶಿ ಮಾಡುತ್ತಿದ್ದಾರೆ. ಆದರೆ ಹಿಂಗಾರು ಮಳೆ ಅಬ್ಬರ ಜೋರಾಗುತ್ತಿರುವದರಿಂದ ಮಳೆಯಿಂದ ಮೆಕ್ಕೆಜೋಳವನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.