ಭೋಪಾಲ್: ಮಧ್ಯಪ್ರದೇಶದಲ್ಲಿ (Madhya Pradesh) ಬಡವರಿಗೆ 450 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ (LPG Cylinder) ನೀಡುವುದಾಗಿ ಬಿಜೆಪಿ (BJP) ಘೋಷಣೆ ಮಾಡಿದೆ. ವಿಧಾನಸಭೆ ಚುನಾವಣೆ (Vidhan Sabha Election) ಹಿನ್ನೆಲೆಯಲ್ಲಿ ಇಂದು 96 ಪುಟಗಳ ʼಸಂಕಲ್ಪ ಪತ್ರʼ ಹೆಸರಿನ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಬಿಡುಗಡೆ ಮಾಡಿದರು.
ಉಚಿತ ಭರವಸೆಯ ಜೊತೆಗೆ ಮಧ್ಯಪ್ರದೇಶ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಮಧ್ಯಪ್ರದೇಶ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದಂತೆ ಸೇರಿ ಹಲವು ಘೋಷಣೆ ಮಾಡಿದೆ.
ಬಿಜೆಪಿಯ ಭರವಸೆ ಏನು?
ಲಾಡ್ಲಿ ಬಹ್ನಾ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 450 ರೂ.ಗೆ ಎಲ್ಪಿಜಿ ಸಿಲಿಂಡರ್. ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ವಾರ್ಷಿಕ 12 ಸಾವಿರ ರೂ. ಹಣಕಾಸು ನೆರವು.
ಮುಂದಿನ ಐದು ವರ್ಷಗಳವರೆಗೆ ಜನರಿಗೆ ಉಚಿತವಾಗಿ ಪಡಿತರ ವಿತರಣೆ. ರೈತರಿಂದ ಕ್ವಿಂಟಾಲ್ಗೆ 2,700 ರೂ.ಗೆ ಗೋಧಿ, 3,100 ರೂ.ಗೆ ಭತ್ತ ಖರೀದಿ.
ಪ್ರತಿಯೊಬ್ಬರಿಗೂ 12ನೇ ತರಗತಿವರೆಗೆ ಉಚಿತ ಶಿಕ್ಷಣ. ಎಲ್ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೆ ಬಡ ಕುಟುಮಬದ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ. ಪ್ರತಿ ಬಾಲಕಿಗೆ ಎರಡು ಲಕ್ಷ ರೂ. (ಬಾಲಕಿಗೆ 21 ವರ್ಷವಾದ ಬಳಿಕ ಪಾವತಿ) ಹಣಕಾಸು ನೆರವು. ಆರು ಹೊಸ ಎಕ್ಸ್ಪ್ರೆಸ್ವೇ ನಿರ್ಮಾಣ. ಬಡವರಿಗೆ ಉಚಿತವಾಗಿ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು.