ಚಿಕ್ಕಮಗಳೂರು:- ರಾಜ್ಯದಾದ್ಯಂತ ವರುಣನ ಆರ್ಭಟ ಜೋರಾಗಿದ್ದು ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಅದರಂತೆ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ದೋಬಿ ಹಳ್ಳ ಪ್ರವಾಹಕ್ಕೆ ತಗ್ಗು ಪ್ರದೇಶದ ಮನೆಗಳು ಮುಳುಗಡೆಯಾಗಿವೆ.
ಮನೆಯಿಂದ ಹೊರಬರಲು ಆಗದೆ ಸಣ್ಣ ಬೋಟ್ ಬಳಸಿ ನೆರೆಯಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ಶಾಲೆ, ಮದರಸ, ಸಂತೆ ಮಾರುಕಟ್ಟೆ, ಮನೆಗಳು ಜಲಾವೃತಗೊಂಡಿದೆ. ಸದ್ಯ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಬೋಟ್ ಬಳಕೆ ಮಾಡುವಂತಾಗಿದೆ
ಕೊಪ್ಪ ತಾಲೂಕಿನ ಹೇರೂರು ಸಮೀಪದ ದೇವಗೋಡು ಗ್ರಾಮದಲ್ಲಿ ಸುಮಾರು ಎರಡು ಎಕರೆ ವಿಸ್ತೀರ್ಣದ ಕೆರೆಯು ಕೋಡಿ ಹೊಡೆದಿದೆ. ಪರಿಣಾಮ ಭತ್ತ ನಾಟಿ ಮಾಡಿದ್ದ ಜಮೀನು ಜಲಾವೃತಗೊಂಡಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭೂ ಕುಸಿದಿದೆ. ಮಲ್ಲೇಶ್ವರ ಗುಡ್ಡದಲ್ಲಿ ಭಾರಿ ಪ್ರಮಾಣದ ಧರೆ ಕುಸಿದು, ರಸ್ತೆಯ ಅರ್ಧ ಭಾಗಕ್ಕೆ ಗುಡ್ಡದ ಮಣ್ಣು ಬಂದಿದೆ. 2019ರಲ್ಲಿ ಕುಸಿತ ಕಂಡಿದ್ದ ಸ್ಥಳದ ಸಮೀಪವೇ ಧರೆ ಕುಸಿದಿದೆ. ಬಾಳೆಹೊಳೆ, ಚನ್ನಹಡ್ಲು, ಬಾಳೆಹೊನ್ನೂರು ರಸ್ತೆಯಲ್ಲಿ ಘಟನೆ ನಡೆದಿದೆ.
ತುಂಗಾ ನದಿಯ ಅಬ್ಬರ ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಜಲಾವೃತವಾಗಿದ್ದು, ಅಂಗಡಿ ಮಳಿಗಗಳು, ಭಾರತಿ ತೀರ್ಥ ರಸ್ತೆಯೂ ಮುಳುಗಡೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿಯತ್ತ ಜನರ ಓಡಾಟಕ್ಕೆ ನಿಷೇಧ ಹೇರಲಾಗಿದೆ. ತಾತ್ಕಾಲಿಕವಾಗಿ ಸುಮಾರು 20ಕ್ಕೂ ಹೆಚ್ಚು ಅಂಗಡಿ ಮಳಿಗೆಗಳು ಕ್ಲೋಸ್ ಆಗಿವೆ. ಇನ್ನೂ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ ಸಂಪೂರ್ಣ ಬಂದ್ ಆಗಿದೆ