ಬೆಂಗಳೂರು: ಜಗತ್ತಿನಲ್ಲಿ ಶೇಕಡ 30ರಷ್ಟು ಜನರಿಗೆ ಮಾತ್ರ ಆರೋಗ್ಯಸೇವೆಗಳು ಲಭ್ಯವಿದ್ದು, ಉಳಿದ ಶೇಕಡ 70ರಷ್ಟು ಜನರಿಗೆ ಅವು ದುಬಾರಿಯಾಗಿವೆ. ಕ್ವಿನ್ ಸಿಟಿಯಲ್ಲಿ ಆರೋಗ್ಯಸೇವೆಗಳಿಗೆ ಸಂಬಂಧಿಸಿದ ನವೋದ್ಯಮಗಳು ನೆಲೆಯೂರಿದರೆ ಆರೋಗ್ಯಸೇವೆಗಳು ಅಗ್ಗವಾಗುತ್ತವೆ. ಆದ್ದರಿಂದ ಈ ವಿನೂತನ ನಗರವು ವೈದ್ಯರು, ದಾದಿಗಳು, ಅರೆವೈದ್ಯಕೀಯ ಸಿಬ್ಬಂದಿಯನ್ನು ಬೃಹತ್ ಸಂಖ್ಯೆಯಲ್ಲಿ ತರಬೇತಿ ನೀಡುವ ಕೇಂದ್ರವಾಗಿ ಹೊರಹೊಮ್ಮಬೇಕು. ಇಲ್ಲಿ ಪಳಗಿದವರನ್ನು ಜಗತ್ತಿನ ಮೂಲೆಮೂಲೆಗಳಿಗೂ ಕಳಿಸಿಕೊಡಬೇಕು ಎಂದು ಖ್ಯಾತ ವೈದ್ಯ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
50 ವರ್ಷದ ವ್ಯಕ್ತಿ ಜೊತೆಗೆ 18ರ ಯುವತಿಯ ಪ್ರೀತಿ-ಪ್ರೇಮ ; ಏಕಾಏಕಿ ನಾಪತ್ತೆ
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗುರುವಾರ ನಡೆದ `ಭಾರತದ ಮುಂದಿನ ನಾವೀನ್ಯತೆಯ ಶಕ್ತಿಕೇಂದ್ರ: ಕ್ವಿನ್ ಸಿಟಿ ಅಭಿವೃದ್ಧಿಗೆ ಕರ್ನಾಟಕದ ನೀಲನಕ್ಷೆ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕ್ವಿನ್ ಸಿಟಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳನ್ನೂ ಪ್ರಧಾನವಾಗಿ ಪರಿಗಣಿಸಲಾಗಿದೆ. ಜಗತ್ತಿನಲ್ಲಿ ತೃಪ್ತಿಕರವಾಗಿ ಆರೋಗ್ಯಸೇವೆಗಳನ್ನು ಒದಗಿಸಬೇಕೆಂದರೆ 30 ಟ್ರಿಲಿಯನ್ ಡಾಲರುಗಳಷ್ಟು ಅಗಾಧ ಹಣವನ್ನು ವಿನಿಯೋಗಿಸಬೇಕಾಗುತ್ತದೆ. ನಾವು ಅನಾರೋಗ್ಯ ಉಂಟಾದಮೇಲೆ ಸೇವೆ ಕೊಡುವುದರ ಬದಲು, ಸಮಸ್ಯೆಯೇ ಉಂಟಾಗದಂತೆ ಆರೋಗ್ಯಸೇವೆಯನ್ನು ಬೆಳೆಸಬೇಕು. ಇನ್ನೊಂದೆಡೆ, ಕಂಪನಿ, ಆಸ್ಪತ್ರೆ ಮತ್ತು ರೋಗಿಗಳ ಅಪನಂಬಿಕೆಯೇ ತುಂಬಿರುವ ವಿಮಾ ಕ್ಷೇತ್ರದ ಚಹರೆಗಳು ಜನಪರವಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತವು ಗುಣಮಟ್ಟದ ವೈದ್ಯರನ್ನು ಸೃಷ್ಟಿಸುತ್ತಿದೆ. ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಕೂಡ ಭಾರತೀಯ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಅಲ್ಲಿನ ಜನ ಬಯಸುತ್ತಾರೆ. ಹಾರ್ವರ್ಡ್ ವಿವಿ ಅಧ್ಯಯನವೇ ಇದನ್ನು ದೃಢಪಡಿಸಿದೆ. ಜತೆಗೆ ನರ್ಸಿಂಗ್ ತರಹದ ಕ್ಷೇತ್ರದಲ್ಲಿ 18 ಮಿಲಿಯನ್ ದಾದಿಗಳ ಕೊರತೆ ಇದೆ. ಹೊರದೇಶಗಳಲ್ಲಿ ಶುಶ್ರೂಷಕಿಯರಾಗಿರುವ ಭಾರತದ ಯುವತಿಯರು ತಿಂಗಳಿಗೆ ಒಂದರಿಂದ ಒಂದೂವರೆ ಲಕ್ಷ ರೂ.ಗಳನ್ನು ತಂದೆ-ತಾಯಿಗೆ ಕಳಿಸುತ್ತಿದ್ದಾರೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು ಎಂದು ಡಾ.ಶೆಟ್ಟಿ ಸೂಚಿಸಿದರು.
ಸ್ಥಳೀಯರಿಗೆ ಅಪಾರ ಉದ್ಯೋಗ: ರಾವ್
ಬೆಂಗಳೂರು ಏರ್ಪೋರ್ಟ್ ಸಿಟಿ ಸಿಇಒ ರಾವ್ ಮುನಿಕುಟ್ಲ ಮಾತನಾಡಿ, `ಕ್ವಿನ್ ಸಿಟಿ ಅಥವಾ ಏರ್ಪೋರ್ಟ್ ಸಿಟಿಗಳಂಥ ಯೋಜನೆಯಿಂದ ಸ್ಥಳೀಯರಿಗೆ ಯಾವ ಲಾಭವೂ ಇಲ್ಲ ಎನ್ನುವುದು ಸರಿಯಲ್ಲ. ವಾಸ್ತವವಾಗಿ ಇಂಥ ಯೋಜನೆಗಳು ಸುತ್ತಮುತ್ತಲಿನ ಜನರಿಗೆ ಒಳ್ಳೆಯ ಆದಾಯವಿರುವಂಥ ಕಸುಬುಗಳನ್ನು ಸೃಷ್ಟಿಸುತ್ತವೆ. ಈ ಉದ್ಯೋಗಗಳಿಗೆ ಇಂಗ್ಲಿಷ್ ಬರಬೇಕೆಂದೇನೂ ಇಲ್ಲ, ಎರಡು ವರ್ಷಗಳ ಒಳ್ಳೆಯ ತರಬೇತಿಯಷ್ಟೇ ಸಾಕು’ ಎಂದರು.
ವಾಸ್ತವವಾಗಿ ದೇವನಹಳ್ಳಿಯ ಸುತ್ತಮುತ್ತ ಆತಿಥ್ಯೋದ್ಯಮ ಕ್ಷೇತ್ರದಲ್ಲಿ ಇನ್ನೂ 7,000 ಹೋಟೆಲ್ ರೂಮುಗಳ ಅಗತ್ಯವಿದೆ. ಈಗ ಇರುವ ಹೋಟೆಲುಗಳು ಸಾಕಾಗುತ್ತಲ್ಲೇ ಇಲ್ಲ. ಸದ್ಯಕ್ಕೆ ನಾವು 4,000 ರೂಮುಗಳನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆಲ್ಲ ಅಡುಗೆ ಮಾಡುವವರು, ಆಹಾರ ಪದಾರ್ಥ ಪೂರೈಸುವವರು ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರದ ಸ್ಥಳೀಯರೇ ಆಗಿದ್ದಾರೆ. ಕೇವಲ ಹತ್ತನೇ ಕ್ಲಾಸಿನವರೆಗೆ ಓದಿಕೊಂಡಿದ್ದು, ಒಳ್ಳೆಯ ತರಬೇತಿ ಇರುವ ಯುವಜನರು ಎಂಜಿನಿಯರಿಂಗ್ ಪದವೀಧರಷ್ಟೇ ಸಂಬಳ ಪಡೆಯುತ್ತಿದ್ದಾರೆ. ಜತೆಗೆ ನಾವು ಕೂಡ ದೇವನಹಳ್ಳಿಯ ಜನರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಕೂಲುಗಳನ್ನು ಪ್ರಾರಂಭಿಸುತ್ತಿದ್ದು, ಉಚಿತವಾಗಿ ಶಿಕ್ಷಣ ಕೊಡುತ್ತಿದ್ದೇವೆ ಎಂದು ಅವರು ವಿವರಿಸಿದರು.
ಗೋಷ್ಠಿಯಲ್ಲಿ ಎಂಬೆಸಿ ಗ್ರೂಪ್ ಸಿಇಒ ಆದಿತ್ಯ ವೀರ್ವಾನಿ, ಬೋಸ್ಟನ್ ಯೂನಿವರ್ಸಿಟಿ ಟ್ರಸ್ಟಿ ರಾಂಚ್ ಕಿಂಬಾಲ್, ನೋವೋ ನಾರ್ಡಿಸ್ಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರೀಯ ಪಾಲ್ಗೊಂಡಿದ್ದರು