ಹುಬ್ಬಳ್ಳಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಾಗುವುದು. ರೈತರಿಗೆ ಗುಣಮಟ್ಟ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷರಾದ ಸೈಯದ್ ಅಜೀಮಪೀರ್ ಎಸ್ ಖಾದ್ರಿ ಹೇಳಿದರು. ಇಂದು ನವನಗರದ ಹೆಸ್ಕಾಂ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯು ಉತ್ತರ ಕರ್ನಾಟಕದ ಭಾಗದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪುರ ಸೇರಿ ಒಟ್ಟು 7 ಜಿಲ್ಲೆಗಳನ್ನು ಒಳಗೊಂಡಿದೆ.
ಹೆಸ್ಕಾಂದಲ್ಲಿ ಒಟ್ಟು 62 ಲಕ್ಷ ಗ್ರಾಹಕರಿದ್ದು ಅದರಲ್ಲಿ 10.49 ಲಕ್ಷ ನೀರಾವರಿ ಪಂಪ್ ಸೆಟ್ಟುಗಳಿವೆ. 33.54 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 467 ವಿವಿಧ ವಿದ್ಯುತ್ ಉಪ-ಕೆಂದ್ರಗಳಿದ್ದು 4,329 11 ಕೆವಿ ಫೀಡರ್ಗಳು ಹಾಗೂ 3.18 ಲಕ್ಷ ವಿತರಣಾ ಪರಿವರ್ತಕಗಳಿವೆ. ಒಟ್ಟು 3,937 ಗ್ರಾಹಕರು ಸೌರ ಮೇಲ್ಛಾವಣಿ ಯೋಜನೆಯಡಿ ಸೌರ ವಿದ್ಯುತ್ ಅಳವಡಿಸಿಕೊಂಡು, 89.93 ಮೆಗಾ ವ್ಯಾಟ್ ವಿದ್ಯುತ್ನ್ನು ಉತ್ಪಾದಿಸುತ್ತಿದ್ದಾರೆ. ಈಗ ಪಿಎಮ್-ಸೂರ್ಯ ಘರ್ ಯೋಜನೆ ಜಾರಿಯಲ್ಲಿದ್ದು ಗ್ರಾಹಕರು ಅದರ ಪ್ರಯೋಜನವನ್ನು ಪಡೆಯಬೇಕು ಎಂದು ತಿಳಿಸಿದರು.
Kitchen Hacks: ಚಳಿಗಾಲದಲ್ಲಿ ಮೊಸರು ಸರಿಯಾಗಿ ಆಗುತ್ತಿಲ್ವಾ..? ಚಿಂತೆ ಬಿಡಿ, ಈ ಟಿಪ್ಸ್ ಪಾಲಿಸಿ
ನೀರಾವರಿ ಪಂಪ್ ಸೆಟ್ಟುಗಳಿಗೆ ಸೌರ ವಿದ್ಯುತ್ ಒದಗಿಸುವ ಕುಸುಮ್-ಬಿ ಯೋಜನೆಯಡಿ 748 ಗ್ರಾಹಕರು ನೋಂದಾಯಿಸಿದ್ದು, ಅದರಲ್ಲಿ 13 ನೀರಾವರಿ ಪಂಪ್ ಸೆಟ್ಟುಗಳು ಕಾರ್ಯಾರಂಭಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ನೀರಾವರಿ ಪಂಪ್ ಸೆಟ್ಟುಗಳಿಗೆ ಹೆಚ್ಚಿನ ವಿದ್ಯುತ್ ಭಾರವಿರುವ ಉಪ-ಕೆಂದ್ರಗಳ ಸಮೀಪ ಪಿಎಮ್ ಕುಸುಮ್-ಸಿ ಯೋಜನೆ ಅಡಿಯಲ್ಲಿ 415.62 ಮೆಗಾ ವ್ಯಾಟ್ ಸೌರ ವಿದ್ಯುತ್ನ್ನು ಉತ್ಪಾದಿಸಲು ಕ್ರಮ ವಹಿಸಲಾಗುತ್ತಿದೆ. ಹೆಸ್ಕಾಂದಲ್ಲಿ ಪ್ರತಿ ತಿಂಗಳು ಸರಿ ಸುಮಾರು 1,595.51 ಮಿಲಿಯನ್ ಯುನಿಟ್ಗಳು ವಿದ್ಯುತ್ ಬಳಕೆಯಾಗುತ್ತಿದ್ದು, ಪ್ರತಿ ತಿಂಗಳು ಸರಾಸರಿ ರೂ.1,016 ಕೋಟಿ ಕಂದಾಯ ಬೇಡಿಕೆ ಇದೆ. ಮುಂದೆ ಬರುವ ಬೇಸಿಗೆ ಕಾಲದಲ್ಲಿ ವಿದ್ಯುತ್ ಬೇಡಿಕೆಯು ಹೆಚ್ಚಾಗುವ ನೀರಿಕ್ಷೆ ಇದ್ದು, ಅದನ್ನು ಪೂರೈಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ನಿಗಮ ಕಚೇರಿಯಲ್ಲಿ ಗ್ರಾಹಕರ ಸೇವಾ ಕೆಂದ್ರವು 3 ಶಿಫ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರು 1912 ಹಾಗೂ 18004251033 ಮತ್ತು 18004254754 ಟೋಲ್ ಫ್ರೀ ನಂಬರ್ಗಳಿಗೆ ವಿದ್ಯುತ್ ಸಮಸ್ಯೆಗಳನ್ನು ಕರೆಮಾಡಿ ತಿಳಿಸಿದಲ್ಲಿ ತಕ್ಷಣ ಪರಿಹರಿಸಲು ಕ್ರಮ ವಹಿಸಲಾಗುತ್ತಿದೆ. ರೈತರ ನೀರಾವರಿ ಪಂಪ್ ಸೆಟ್ಟುಗಳಿಗೆ ವಿದ್ಯುತ್ ಸರಬರಾಜು ಮಾಡುವ ಪರಿವರ್ತಕಗಳು (TC) ವಿಫಲವಾಗಿದ್ದಲ್ಲಿ ಅವುಗಳನ್ನು ತ್ವರಿತವಾಗಿ ಬದಲಾಯಿಸಲು ಕ್ರಮ ವಹಿಸುತ್ತೇನೆ. ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ವಿದ್ಯುತ್ ಅಪಘಾತ ಪ್ರಕರಣಗಳಲ್ಲಿ ಪರಿಹಾರಗಳನ್ನು ತ್ವರಿತವಾಗಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ವಿವರಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹ ಜ್ಯೋತಿ ಯೋಜನೆಯು ಬಡವರಿಗೆ ಆಸರೆಯಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಿ, ಸಮಾಲೋಚನೆ ನಡೆಸಲಾಗುವುದು. ಹೆಸ್ಕಾಂ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲು ಮುಂದಾಗುತ್ತೇನೆ. ಈಗಾಗಲೇ ಹೆಸ್ಕಾಂನಲ್ಲಿ 560 ಲೈನ್ ಮೆನ್ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನನಗೆ ನೀಡಿರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡು, ಸಮಸ್ಯೆಗಳನ್ನು ಪರಿಹರಿಸಲಾಗುವುದು. ವಿದ್ಯುತ್ ಬಾಕಿ ಬಿಲ್ ಇರುವುದು ಗಮನಕ್ಕೆ ಬಂದಿದ್ದು, ತ್ವರಿತಗತಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.