ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಕ್ರೇನ್ ಯುದ್ಧ ಸಂಬಂಧ ಮಾತುಕತೆ ನಡೆಸಲು ಸಿದ್ಧ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪುಟಿನ್, ಟ್ರಂಪ್ ಅವರೊಂದಿಗೆ ಎಂದಾದರೂ ಚರ್ಚೆ ನಡೆಸಲು ಅವಕಾಶ ಸಿಕ್ಕರೆ ಖಂಡಿತವಾಗಿಯೂ ಉಕ್ರೇನ್ ಒಪ್ಪಂದದ ಕುರಿತು ಮಾತುಕತೆ ನಡೆಸಲಿದ್ದೇನೆ ಎಂದಿದ್ದಾರೆ.
ನಾನು ಟ್ರಂಪ್ ಅವರನ್ನು ಯಾವಾಗ ಭೇಟಿಯಾಗಲಿದ್ದೇನೆ ಎಂಬುದು ತಿಳಿದಿಲ್ಲ. ಅವರು ಕೂಡ ಯಾವುದಕ್ಕೂ ಖಚಿತಪಡಿಸಿಲ್ಲ. ಕಳೆದ 4 ವರ್ಷಗಳಿಂದ ಅವರ ಜೊತೆ ಮಾತುಕತೆ ನಡೆಸಿಲ್ಲ. ಆದರೆ ಯಾವಾಗ ಬೇಕಾದರೂ ಭೇಟಿಯಾಗಲು ಸಿದ್ಧವಿದ್ದೇನೆ, ಜೊತೆಗೆ ಉಕ್ರೇನ್ ಯುದ್ಧದ ಸಂಬಂದು ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದಾರೆ.
ಮುಂದಿನ ವರ್ಷ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲದೆ ʻನರಮೇಧʼ ಕೊನೆಗೊಳಿಸಲು ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಮೇಲುಗೈ ಸಾಧಿಸಿದೆ. ಆದ್ರೆ ಬಹಳ ಹಿಂದೆಯೇ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಜೊತೆಗೆ ಈಗ ಏನಾಗುತ್ತಿದೆ ಎಂದು ಗಮನಿಸಿದಾಗ ಆ ನಿರ್ಧಾರ ಹಿಂದೆಯೇ ತೆಗೆದುಕೊಳ್ಳಬೇಕಿತ್ತು ಎಂದೂ ಸಹ ಪುಟಿನ್ ಹೇಳಿದ್ದಾರೆ.