ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಡಿ. 5ರಂದು ವಿವಿಧ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಕಂಡ ಈ ಚಿತ್ರ ಕೇವಲ ಐದೇ ಐದು ದಿನಕ್ಕೆ ಬರೋಬ್ಬರಿ 800 ಕೋಟಿ ರೂ. ಕಲೆಕ್ಷನ್ ಮಾಡುವು ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ.
ಭಾರತ ಮತ್ತು ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ಅತಿ ಹೆಚ್ಚು ಗಳಿಸಿದ ಭಾರತದ ಚಿತ್ರ ಎನ್ನುವ ದಾಖಲೆ ಬರೆದ ʼಪುಷ್ಪ 2ʼ ಈಗಾಗಲೇ ಹಲವು ರೆಕಾರ್ಡ್ಗಳನ್ನು ಬ್ರೇಕ್ ಮಾಡಿದೆ. ಅದರಲ್ಳೂ ವೀಕೆಂಡ್ನಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
ಮೊದಲ ಸೋಮವಾರವಾದ ಇವತ್ತಿನ ಗಳಿಕೆಯನ್ನೂ ಸೇರಿಸಿದರೆ ‘ಪುಷ್ಪ 2’ ಜಾಗತಿಕವಾಗಿ 870 ಕೋಟಿ ರೂ. ಗಳಿಸಲಿದೆ ಎಂದು ಸಿನಿ ಪಂಡಿತರು ಊಹಿಸಿದ್ದಾರೆ. ಹೀಗಾಗಿ ಚಿತ್ರರಂಗದ ಮೈಲಿಗಲ್ಲು ಎಂದೇ ಪರಿಗಣಿಸಲಾಗುವ 1 ಸಾವಿರ ಕೋಟಿ ರೂ. ಕ್ಲಬ್ಗೆ ಸೇರಲು ಈ ಚಿತ್ರಕ್ಕೆ ಹೆಚ್ಚು ದಿನ ಬೇಕಾಗಿಲ್ಲ. ಮೊದಲ ವಾರದಲ್ಲೇ ʼಪುಷ್ಪ 2ʼ ಚಿತ್ರ 1 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎನ್ನಲಾಗುತ್ತದೆ. ಈ ಮೂಲಕ 1 ಸಾವಿರ ಕೋಟಿ ರೂ. ಕ್ಲಬ್ ಸೇರಿದ ಭಾರತದ ಕೆಲವೇ ಕೆಲವು ಚಿತ್ರಗಳಲ್ಲಿ ಇದೂ ಒಂದು ಎನಿಸಿಕೊಳ್ಳಲಿದೆ. ಜತೆಗೆ 1 ಸಾವಿರ ಕೋಟಿ ಕ್ಲಬ್ ಸೇರಿದ 2024ರ 2ನೇ ಭಾರತದ ಸಿನಿಮಾವಾಗಲಿದೆ. ಈ ವರ್ಷದ ಜೂನ್ನಲ್ಲಿ ತೆರೆಕಂಡ ಪ್ರಭಾಸ್-ದೀಪಿಕಾ ಪಡುಕೋಣೆ-ಅಮಿತಾಭ್ ಬಚ್ಚನ್ ಅಭಿನಯದ ʼಕಲ್ಕಿ 2898 ಎಡಿʼ ಈಗಾಗಲೇ 1 ಸಾವಿರ ಕೋಟಿ ರೂ. ಕ್ಲಬ್ ಸೇರಿದೆ.
3 ದಿನಗಳಲ್ಲಿ ʼಪುಷ್ಪ 2ʼ ಭಾರತವೊಂದರಲ್ಲೇ 387.95 ಕೋಟಿ ರೂ. ಗಳಿಸಿದೆ. ಇನ್ನು ಮೊದಲ ಭಾನುವಾರವಾದ ಡಿ. 8ರಂದು 141.50 ಕೋಟಿ ರೂ. ಹರಿದು ಬಂದಿದೆ. ಆ ಮೂಲಕ ಭಾರತದ ಒಟ್ಟು ಕಲೆಕ್ಷನ್ 529.45 ಕೋಟಿ ರೂ.ಗೆ ತಲುಪಿದೆ. ಈ ಪೈಕಿ ಹಿಂದಿ ವರ್ಷನ್ ಭಾನುವಾರ 85 ಕೋಟಿ ರೂ. ಬಾಚಿಕೊಂಡಿದೆ. ಇನ್ನು ತೆಲುಗಿನಿಂದ 44 ಕೋಟಿ ರೂ., ತಮಿಳಿನಿಂದ 9.5 ಕೋಟಿ ರೂ., ಕನ್ನಡದಿಂದ 1.1 ಕೋಟಿ ರೂ. ಮತ್ತು ಮಲಯಾಳಂನಿಂದ 1.9 ಕೋಟಿ ರೂ. ಹರಿದು ಬಂದಿದೆ. ಅಮೆರಿಕದಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಪಕ್ಕಾ ಕಮರ್ಷಿಯಲ್ ಮಾದರಿಯಲ್ಲಿ ಚಿತ್ರ ಮೂಡಿ ಬಂದಿದ್ದು, ಟಿಕೆಟ್ ಬೆಲೆ ಹೆಚ್ಚಳ, ಅತೀ ಹೆಚ್ಚಿನ ಶೋ ಇತ್ಯಾದಿ ಇಷ್ಟೊಂದು ಕಲೆಕ್ಷನ್ ಮಾಡಲು ಕಾರಣ ಎನ್ನಲಾಗುತ್ತಿದೆ. ವಿಶೇಷ ಎಂದರೆ ಒರಿಜಿನಲ್ ತೆಲುಗಿಗಿಂತಲೂ ಹಿಂದಿ ವರ್ಷನ್ ಗಳಿಕೆಯೇ ಹೆಚ್ಚಿದೆ.