ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾದ ಪ್ರೀಮಿಯರ್ ವೇಳೆ ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಘಟನೆಯಲ್ಲಿ ಆಕೆಯ ಮಗನ ಸ್ಥಿತಿಯೂ ಗಂಭೀರವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಆ ಎಂಟು ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಹೈದ್ರಾಬಾದ್ನ ಕಿಮ್ಸ್ ಆಸ್ಪತ್ರೆಯೂ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಎಂಟು ವರ್ಷದ ಬಾಲಕ ಶ್ರೀತೇಜನನ್ನು ಸದ್ಯ ಇನ್ಸೆಂಟೀವ್ ಕೇರ್ನಲ್ಲಿ ಇಡಲಾಗಿದ್ದು ನ್ಯೂರಾಲಜಿಕಲ್ ಸಮಸ್ಯೆಗಳು ಸುಧಾರಿಸಿವೆ. ಆದ್ರೆ ಬಾಲಕನನ್ನು ಈಗಲೂ ವೆಂಟಿಲೇಟರ್ ಮೇಲೆಯೇ ಇಡಲಾಗಿದೆ ಎಂದು ಹೇಳಲಾಗುತ್ತಿದೆ.
ವೈದ್ಯರು ಹೇಳುವ ಪ್ರಕಾರ ಬಾಲಕ ಆಕ್ಸಿಜನ್ ಪೈಪ್ ಮೂಲಕ ಉಸಿರಾಡುತ್ತಿದ್ದಾನೆ. ಸದ್ಯ ವೆಂಟಿಲೇಟರ್ ಅಳವಡಿಸಲಾಗಿದ್ದು, ನಿಧಾನಕ್ಕೆ ಜ್ವರ ಕಡಿಮೆ ಆಗುತ್ತಿದೆ. ವಿಟಲ್ ಪ್ಯಾರಾಮೀಟರ್ ಸ್ಟೇಬಲ್ ಆಗಿದ್ದು. ನೀಡುತ್ತಿರುವ ಚಿಕಿತ್ಸೆಗೆ ಸದ್ಯ ಸ್ಪಂದಿಸುತ್ತಿದ್ದಾನೆ ಎಂದು ಹೇಳಿದ್ದಾರೆ.
ಆಸ್ಪತ್ರೆ ನೀಡಿರುವ ವರದಿ ಪ್ರಕಾರ ಡಿಸೆಂಬರ್ 4 ರಂದು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಉಸಿರಾಟದ ಪ್ರಕ್ರಿಯೆ ಸಾಮಾನ್ಯವಾಗಿ ಇರಲಿಲ್ಲ. ಹೀಗಾಗಿ ಬ್ರಿಥೀಂಗ್ ಸಪೋರ್ಟ್ ನೀಡಬೇಕಾಯ್ತು. ಬಳಿಕ ಡಿಸೆಂಬರ್ 10 ರಂದು ಅದನ್ನು ತೆಗೆಯಲಾಯ್ತು. ಮರಳಿ ಸಮಸ್ಯೆಗಳು ಶುರುವಾದಾಗ ಮತ್ತೆ ಡಿಸೆಂಬರ್ 12 ರಂದು ಬ್ರಿಥೀಂಗ್ ಸಪೋರ್ಟ್ ನೀಡಬೇಕಾಯ್ತು ಎಂದು ಹೇಳಿದ್ದಾರೆ.
ಇನ್ನು ಹೈದ್ರಾಬಾದ್ನ ಪೊಲೀಸ್ ಕಮಿಷನರ್ ಸಿ.ವಿ. ಆನಂದ ಆಸ್ಪತ್ರೆಗೆ ಭೇಟಿ ನೀಡಿದ್ದು. ಕಾಲ್ತುಳಿತದಲ್ಲಿ ಉಸಿರಾಟದ ತೊಂದರೆಯಾಗಿದ್ದರಿಂದ ಬಾಲಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಇಂತಹ ಸಮಸ್ಯೆಗಳಿಂದ ಹೊರಬರಲು ಸ್ವಲ್ಪ ಕಾಲ ಹಿಡಿಯುತ್ತದೆ ಎಂದಿದ್ದಾರೆ. ಘಟನೆ ನಡೆದು 14 ದಿನಗಳಾದರೂ ಕೂಡ ಬಾಲಕನ ಪರಿಸ್ಥಿತಿ ಇನ್ನೂ ಕೂಡ ಚಿಂತಾಜನಕವಾಗಿದೆ. ಅತ್ತ ಹೆಂಡತಿಯನ್ನು ಕಳೆದುಕೊಂಡು ಇತ್ತ ಮಗನ ಸ್ಥಿತಿ ನೋಡಿ ಮೃತ ರೇವತಿ ಪತಿ ಕಣ್ಣೀರು ಹಾಕುತ್ತಿದ್ದಾರೆ.