ದಾವಣಗೆರೆ: ತಮ್ಮ ಭಾಷಣದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರನ್ನು ಬಂಧಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಮುಸ್ಲಿಂ ಒಕ್ಕೂಟ ಒತ್ತಾಯಿಸಿದೆ. ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ಟಿ.ಅಸ್ಗರ್,
“ಶ್ರೀರಂಗಪಟ್ಟಣದಲ್ಲಿ ಮಾತನಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ‘ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ’ ಎಂದು ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಮಾತನಾಡಿದ್ದಾರೆ. ವಿವಾಹಿತ ಮಹಿಳೆಯರ ಲೈಂಗಿಕ ಜೀವನವನ್ನು ಬಹಿರಂಗವಾಗಿ ಅವಮಾನಿಸಿದ್ದಾರೆ. ಆತನನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ತಂಜಿಮ್ ಕಮಿಟಿ ಕಾರ್ಯದರ್ಶಿ ಶಾನವಾಜ್ ಖಾನ್ ಮಾತನಾಡಿ, “ಪ್ರಪಂಚದಲ್ಲಿ ಹೆಣ್ಣಿಗೆ ಪೂಜೆ ಮಾಡುವ ಏಕೈಕ ದೇಶ ಭಾರತ. ಇಂತಹ ದೇಶದಲ್ಲಿ ಹುಟ್ಟಿದ ಕಲ್ಲಡ್ಕ ಪ್ರಭಾಕರ್ ಭಟ್ಗೆ ಆರ್ಎಸ್ಎಸ್ ಇಂತಹ ಹೊಲಸು ಮಾತುಗಳನ್ನು ಕಲಿಸಿದೆ. ಧರ್ಮ ಧರ್ಮ ಗಳಲ್ಲಿ ವಿಷ ಬೀಜ ಬಿತ್ತಿ, ಶಾಂತಿಯ ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಪ್ರಯತ್ನಿಸುತ್ತಿರುವ ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್ನನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.