ಬೆಂಗಳೂರು:- ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಬರ ಪರಿಹಾರ ಶೀಘ್ರವೇ ನೀಡಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಪ್ರಸಕ್ತ ವರ್ಷ ಶೇ.73ರಷ್ಟು ಮಳೆ ಕೊರತೆ ಉಂಟಾಗಿದ್ದು, ಅದರಿಂದಾಗಿ ರಾಜ್ಯದ 223 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಅದರಲ್ಲಿ ಸೆ. 22ರಂದು ರಾಜ್ಯ ಸರ್ಕಾರ 195 ತಾಲೂಕುಗಳಲ್ಲಿ ಬರದ ಪರಿಸ್ಥಿತಿಯಿದ್ದು, ಎನ್ಡಿಆರ್ಎಫ್ ನಿಯಮಗಳಂತೆ ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಿತ್ತು. ಇದಾದ ನಂತರ ಮಳೆಯ ಕೊರತೆ ತೀವ್ರಗೊಂಡು ಮತ್ತೆ ಉಳಿದ ತಾಲೂಕುಗಳಲ್ಲೂ ಬರದ ಪರಿಸ್ಥಿತಿ ಎದುರಾಗಿತ್ತು. ಅದರ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಮನವಿ ಸಲ್ಲಿಸಲಾಗಿತ್ತು ಎಂದಿದ್ದಾರೆ.
ಅದರ ಆಧಾರದಲ್ಲಿ ಕೇಂದ್ರ ಬರ ಅಧ್ಯಯನ ತಂಡವು ರಾಜ್ಯಕ್ಕೆ ಬಂದು ಅಕ್ಟೋಬರ್ 5ರಿಂದ 9ರವರೆಗೆ ಬರ ಪರಿಸ್ಥಿತಿಯನ್ನು ವೀಕ್ಷಿಸಿ ತೆರಳಿದೆ. ಆದರೆ ಈವರೆಗೆ ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳನ್ನೂ ಕೇಂದ್ರದ ತಂಡ ಈವರೆಗೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆಯಿಂದಾಗಿ ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದ 35,162.05 ಕೋಟಿ ರು. ಮೊತ್ತದ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವುಂಟಾಗಿದೆ. ಅದರಲ್ಲಿ ಸಣ್ಣ ಹಿಡುವಳಿದಾರರಿಗೇ ಹೆಚ್ಚು ನಷ್ಟವಾಗಿದೆ. ರಾಜ್ಯದಲ್ಲಿ 2 ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿರುವ 52.73 ಲಕ್ಷ ರೈತರಿದ್ದು, ಬರದಿಂದಾಗಿ ಅವರು ಹೆಚ್ಚಿನ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೆ ಅಕ್ಟೋಬರ್ ತಿಂಗಳಲ್ಲಿ 324 ಕೋಟಿ ರು. ಎಸ್ಡಿಆರ್ಎಫ್ ಮೂಲಕ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಅದೇ ರೀತಿ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಎನ್ಡಿಆರ್ಎಫ್ ಮೂಲಕ 18,171.44 ಕೋಟಿ ರು. ಬರ ಪರಿಹಾರ ನೀಡಬೇಕಿದೆ. ಅದರ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.