ದೆಹಲಿ: ಕೇಂದ್ರ ಬಜೆಟ್ನಲ್ಲಿ (Budget) ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಗಮನ ಸೆಳೆಯಲು, ನಮ್ಮ ಪಾಲಿನ ಅನುದಾನದ ಬಗ್ಗೆ ಜನರಿಗೆ ಮನದಟ್ಟು ಮಾಡಲು ರಾಜ್ಯ ಸರ್ಕಾರ ದೆಹಲಿಯಲ್ಲಿ (New Delhi) ಹೋರಾಟ ನಡೆಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ತಿಳಿಸಿದರು.
ಫೆ.7ರಂದು ರಾಜ್ಯ ಸರ್ಕಾರದ ವತಿಯಿಂದ ನಡೆಯಲಿರುವ ಪ್ರತಿಭಟನೆಯ ಸ್ಥಳ ಜಂತರ್ ಮಂತರ್ನಲ್ಲಿ ಪರಿಶೀಲನೆ ನಡೆಸಿ, ಸೋಮವಾರ ರಾತ್ರಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು. ಇಂದು ರಾಜ್ಯ ಸರ್ಕಾರ ನಡೆಸಲಿರುವ ಪ್ರತಿಭಟನಾ ಸ್ಥಳ ಪರಿಶೀಲಿಸಿದ್ದೇನೆ. ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟ ಇದಾಗಿದ್ದು, ಇದು ಪಕ್ಷದ ಹೋರಾಟವಲ್ಲ. ನಮ್ಮ ತೆರಿಗೆ ನಮ್ಮ ಹಕ್ಕು. ನಮ್ಮ ಅನುದಾನ ನಮ್ಮ ಹಕ್ಕು. ನಮ್ಮ ಅಭಿವೃದ್ಧಿ ನಮ್ಮ ಜವಾಬ್ದಾರಿ. ಈ ವಿಚಾರವಾಗಿ ಜನರಿಗೆ ಮನದಟ್ಟು ಮಾಡಬೇಕು. ನಮ್ಮ ಪಾಲಿನ ಅನುದಾನ ಕೊಡಿಸುವುದು ನಮ್ಮ ಜವಾಬ್ದಾರಿ. ಜನ ನಮಗೆ ಮತ ಹಾಕಿ ಅಧಿಕಾರಕ್ಕೆ ತಂದಿದ್ದಾರೆ. ನಾವು ಸಮಾಜದ ಋಣ ತೀರಿಸಬೇಕು. ಬಿಜೆಪಿ ಡಬಲ್ ಎಂಜಿನ್ ಸರ್ಕಾರ ನಮಗೆ ನ್ಯಾಯ ಒದಗಿಸಲಿದೆ ಎಂದು ಭಾವಿಸಿದ್ದೆವು ಎಂದರು.
ಯಡಿಯೂರಪ್ಪ (BS Yediyurappa) ಅವರು ಸಿಎಂ ಆಗಿದ್ದಾಗ ಒಮ್ಮೆ ತುಮಕೂರಿನ ಸಾರ್ವಜನಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಮಂತ್ರಿಗಳ ಮುಂದೆ ಮನವಿ ಮಾಡಿದ್ದು ಬಿಟ್ಟರೆ ಒಂದು ದಿನ ಕೇಂದ್ರ ಸರ್ಕಾರದ ಜೊತೆ ರಾಜ್ಯದ ಹಿತದ ಬಗ್ಗೆ ಚರ್ಚೆ ಮಾಡಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ 27 ಸಂಸದರು ಒಂದು ದಿನ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿಲ್ಲ. ರಾಜ್ಯ ಬರಕ್ಕೆ ತುತ್ತಾಗಿದ್ದರೂ ಪರಿಹಾರ ಕೊಡಲಿಲ್ಲ ಎಂದು ಕಿಡಿಕಾರಿದರು.