ಬಳ್ಳಾರಿ: ಸವಿತಾ ಸಮಾಜದವರನ್ನು ಹಜಾಮ ಎಂಬ ಪದ ಬಳಕೆ ಮಾಡುವ ಮೂಲಕ ಸಮಾಜದವರ ಕುಲವೃತ್ತಿಯನ್ನು ಅವಮಾನಿಸಿದ ಬಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೂಡಲೇ ಬಹಿರಂಗವಾಗಿ ಸವಿತಾ ಸಮಾಜದವರಿಗೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ನಗರ ಸವಿತಾ ಸಮಾಜ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿ ಜಮಾಯಿಸಿದ ನಗರ ಸವಿತಾ ಸಮಾಜ ಸಂಘದ ಪದಾಧಿಕಾರಿಗಳು ಮೆರವಣಿಗೆಯುದ್ಧಕ್ಕೂ ಯತ್ನಾಳ್ರಿಗೆ ಧಿಕ್ಕಾರ ಹಾಗೂ ಇನ್ನಿತರೆ ಘೋಷಣೆಗಳನ್ನು ಕೂಗುತ್ತಾ, ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಮನವಿ ಪತ್ರವನ್ನು ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
Mutual Fund: ಈ ಮ್ಯೂಚುವಲ್ ಫಂಡ್ʼನಲ್ಲಿ ದಿನಕ್ಕೆ ಜಸ್ಟ್ 50 ರೂಪಾಯಿ ಹೂಡಿಕೆ ಮಾಡಿ 30 ಲಕ್ಷ ಗಳಿಸಿ.!
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸವಿತಾ ಸಮಾಜದ ನಗರ ಅಧ್ಯಕ್ಷ ಅರುಣ್ ಹಾಗೂ ಉಪಾಧ್ಯಕ್ಷ ಟಿ.ನಾಗರಾಜ್ ಅವರು ಮಾತನಾಡಿ, ೨೦೧೧ರಲ್ಲೇ ರಾಜ್ಯ ಸರ್ಕಾರವು ಹಜಾಮ ಎಂಬ ಪದವನ್ನು ನಿಷೇಧಗೊಳಿಸಿದೆ. ಹಾಗಿದ್ದರೂ ಪ್ರತಿನಿತ್ಯ ರಾಜಕೀಯ ಪ್ರತಿನಿಧಿಗಳು ತಮ್ಮ ರಾಜಕೀಯ ತೆವಲಿಗೆ ಹಜಾಮ ಎಂಬ ಪದವನ್ನು ಬಳಕೆ ಮಾಡುತ್ತಾ ರಾಜ್ಯದ ಸವಿತಾ ಸಮಾಜ ಬಂಧುಗಳಿಗೆ ಅವಮಾನಿಸುತ್ತಿದ್ದಾರೆ.
ಅಂತೆಯೇ ಇತ್ತೀಚಿಗೆ ಬಿಜಾಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಜಾಮ ಎಂಬ ಪದವನ್ನು ಬಳಕೆ ಮಾಡಿದ್ದು, ಇದು ರಾಜ್ಯದ ಸವಿತಾ ಸಮಾಜದವರಿಗೆ ನೋವುಂಟು ಮಾಡಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸವಿತಾ ಸಮಾಜದವರ ಪಾತ್ರ ಬಹಳಷ್ಟಿದ್ದು, ಅವರನ್ನು ಅವಮಾನಿಸುತ್ತಿರುವುದು, ಹೀಯಾಳಿಸುತ್ತಿರುವುದು ಸಮಂಜಸವಲ್ಲ ಎಂದು ಕಿಡಿಕಾರಿದ್ದಾರೆ.ಈ ನಿಟ್ಟಿನಲ್ಲಿ ಬಸವನಗೌಡ ಯತ್ನಾಳ್ರು ಈ ಕೂಡಲೇ ಮಾಧ್ಯಮದ ಮೂಲಕವಾಗಲಿ ಅಥವಾ ಬಹಿರಂಗವಾಗಲಿ ಸವಿತಾ ಸಮಾಜದ ಬಂಧುಗಳಿಗೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲು ಕೂಡ ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಲಾಯಿತು.