ವಿಜಯಪುರ : ವಿಜಯಪುರದಲ್ಲಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರೋದನ್ನ ಖಂಡಿಸಿ ಸರ್ಕಾರಿ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿ ಪ್ರಕ್ರಿಯೆ ವಿಚಾರವಾಗಿ ಚಿಕ್ಕಲಕಿ ಏಜೆನ್ಸಿ ಅವರಿಗೆ ಟೆಂಡರ್ ಸಿಗದಿದ್ದಕ್ಕೆ ವಿಜಯಪುರ ನಗರದಾದ್ಯಂತ ಜಿಲ್ಲಾಸ್ಪತ್ರೆ ಸರ್ಜನ್ ಹಾಗೂ ಡಿಎಚ್ಓ ಸೇರಿದಂತೆ ಅಧಿಕಾರಿಗಳ ಹೆಸರು ಹಾಕಿ ಪೋಸ್ಟರ್ ಅಂಟಿಸಿ ಹೋರಾಟ ಮಾಡೋದಕ್ಕೆ ಮುಂದಾಗಿದ್ದಾರೆ. ಕಾನೂನಾತ್ಮಕವಾಗಿ ಟೆಂಡರ್ ಪ್ರಕ್ರಿಯೆ ನಡೆದರೂ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರರಿಗೆ ರಕ್ಷಣೆ ಕೊಡಬೇಕು ಜೊತೆಗೆ ನಕಲಿ ಪತ್ರಕರ್ತರು, ಆರ್ ಟಿಐ ಕಾರ್ಯಕರ್ತರು, ಕೆಲವು ಸಂಘ ಸಂಸ್ಥೆಗಳಿಂದ ಸರ್ಕಾರಿ ನೌಕರರಿಗೆ ಕಿರುಕುಳ ಆಗ್ತಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್ ದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಕೆಲಕಾಲ ಹೋರಾಟ ನಡೆಸಿ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರೋದನ್ನ ತಪ್ಪಿಸುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಜಿಲ್ಲಾಸ್ಪತ್ರೆಯ ಸರ್ಜನ್ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು, ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ಸರ್ಕಾರಿ ನೌಕರರ ಸಂಘದ ವಿವಿಧ ಇಲಾಖೆಗಳ ಮುಖ್ಯಸ್ಥರು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.