ನೇಪಾಳದಲ್ಲಿ 16 ವರ್ಷಗಳ ಹಿಂದೆ ನಡೆದ ಬೃಹತ್ ಪ್ರತಿಭಟನೆಗಳು ಆಗಿನ ರಾಜ ಜ್ಞಾನೇಂದ್ರ ಶಾ ಅವರನ್ನು ಸಿಂಹಾಸನ ತೊರೆದು ಪ್ರಜಾಪ್ರಭುತ್ವಕ್ಕೆ ಹಾದಿ ಮಾಡಿಕೊಡುವಂತೆ ಮಾಡಿತ್ತು. ಇದೀಗ ಅದೇ ರಾಜ ಜ್ಞಾನೇಂದ್ರ ಶಾ ಅವರನ್ನು ಪುನಃ ಸಿಂಹಾಸನಕ್ಕೇರಿಸಲು ದೇಶದಲ್ಲಿ ಪ್ರತಿಭಟನೆಯ ಆರಂಭವಾಗಿದೆ.
ಈ ಬಾರಿ ಪ್ರತಿಭಟನಕಾರರು ಜ್ಞಾನೇಂದ್ರ ಶಾ ಅವರನ್ನು ರಾಜನಾಗಿ ಸಿಂಹಾಸನದಲ್ಲಿ ಮತ್ತೆ ಕೂರಿಸಬೇಕು, ಹಿಂದೂ ಧರ್ಮವನ್ನು ರಾಷ್ಟ್ರ ಧರ್ಮವಾಗಿ ಮರಳಿ ಸ್ಥಾಪಿಸಬೇಕೆಂದು ಹೋರಾಟಕ್ಕೆ ಮುಂದಾಗಿದ್ದಾರೆ. ದೇಶದ ಪ್ರಮುಖ ರಾಜಕೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಆಡಳಿತ ವಿಫಲವಾಗಿದೆ ಎಂದು ರಾಜಪ್ರಭುತ್ವದ ನಿಷ್ಠರು ಆರೋಪಿಸುತ್ತಿದ್ದು, ರಾಜಕಾರಣಿಗಳ ನಡೆಯಿಂದ ಜನಸಾಮಾನ್ಯರು ಹತಾಶರಾಗಿರುವುದು ಕಾಣಬರುತ್ತಿದೆ.
ದೇಶದಲ್ಲಿನ ಸದ್ಯದ ವ್ಯವಸ್ಥೆಯಿಂದಾಗಿ ಬೆಳೆಯುತ್ತಿರುವ ಹತಾಶೆಯು ಆಮೂಲಾಗ್ರ ಬದಲಾವಣೆಯ ಒಕ್ಕೊರಲ ಕೂಗಿಗೆ ಕಾರಣವಾಗಿದೆ. ರಾಜಪ್ರಭುತ್ವದ ಪರವಾದ ರ್ಯಾಲಿಗಳು ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿವೆ. ಹೆಚ್ಚಿನ ಜನರು ತಮ್ಮ ಮನೆಗಳು ಮತ್ತು ಅಂಗಡಿಮುಂಗಟ್ಟು, ವಾಣಿಜ್ಯಮಳಿಗೆಗಳ ಮುಂದೆ ಮಾಜಿ ದೊರೆ ಮತ್ತು ಅವರ ಪೂರ್ವಜರ ಭಾವಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ.
‘ಮರಳಿ ಬನ್ನಿ ದೊರೆ, ದೇಶವನ್ನು ಉಳಿಸಿ. ನಮ್ಮ ಪ್ರೀತಿಯ ದೊರೆಗೆ ಜಯವಾಗಲಿ. ನಮಗೆ ರಾಜಪ್ರಭುತ್ವ ಬೇಕು’ ಎಂದು ಜನಸ್ತೋಮವು ಕಳೆದ ತಿಂಗಳು ರಾಜಧಾನಿಯಲ್ಲಿ ನಡೆದ ಪ್ರತಿಭಟನ ರ್ಯಾಲಿಯಲ್ಲಿ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.