ಬೆಂಗಳೂರು: ಸಿರಿಧಾನ್ಯ ಬಳಸಿ ಆರೋಗ್ಯ ಬೆಳೆಸಿ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕರೆ ನೀಡಿದ್ದಾರೆ.
ಕೃಷಿ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಕ್ರೈಸ್ಟ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಮಿಲೆಟ್ ತಿಂತೀರಾ ವಿಚಾರ ವಿನಿಮಯ,ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚು ಪೌಷ್ಠಿಕತೆ ಹೊಂದಿರುವ ಸಿರಿಧಾನ್ಯ ಸದೃಡ ದೇಹ ಹಾಗೂ ಮನಸ್ಸಿನ ನಿರ್ಮಾಣಕ್ಕೆ ಸಹಕಾರಿಯಾಗಿದೆ.
ಯುವ ಸಮುದಾಯ ಇದನ್ನು ಹೆಚ್ಚು ಬಳಸಿ, ಸಾರ್ವಜನಿಕರಿಗೂ ಅರಿವು ಮೂಡಿಸಬೇಕು ಎಂದರು.
ಸಿರಿಧಾನ್ಯ ಅತ್ಯಂತ ಪರಿಪೂರ್ಣ ಆಹಾರ, ಜಾಗತಿಕ ಮಾರುಕಟ್ಟೆಯಲ್ಲಿಯೂ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಸಹ ಜಂಕ್ ಪುಡ್ ಬಿಟ್ಟು ಪ್ರತಿದಿನ ಮಿಲೆಟ್ ಬಳಸುವುದು ಉತ್ತಮ ಎಂದರು.
ಸಿರಿಧಾನ್ಯ ಕಡಿಮೆ ವೆಚ್ಚ, ಮಿತ ನೀರಿನಲ್ಲಿ ಬೆಳೆಯುವ ಆಹಾರವಾಗಿದೆ.ಕರ್ನಾಟಕ ಸರ್ಕಾರ 2013 ರಿಂದಲೂ ಇದರ ಪ್ರೋತ್ಸಾಹಕ್ಕೆ ಹಲವು ಯೋಜನೆ ಜಾರಿಗೆ ತಂದಿದೆ. ಪ್ರತಿವರ್ಷ ಮೇಳಗಳನ್ನು ಆಯೋಜಿಸುತ್ತಿದ್ದು ಈ ಬಾರಿ ಜ 5-7ರ ವರಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಸಾವಯವ, ಸಿರಿಧಾನ್ಯ ವಾಣಿಜ್ಯ ಮೇಳ ಆಯೋಜಿಸಲಾಗಿದೆ ಎಂದರು.
ದೇಶ ವಿದೇಶಗಳ ವಿಜ್ಞಾನಿಗಳು, ತಜ್ಞರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಅನುಕೂಲ ಪಡೆಯಬೇಕು ಎಂದು ಕೃಷಿ ಸಚಿವರು ಮನವಿ ಮಾಡಿದರು.
ಕ್ರೈಸ್ಟ್ ವಿಶ್ವವಿದ್ಯಾಲಯದ ಕುಲಪತಿ ಫಾದರ್ ಡಾ ಜೋಸೆಫ್ ಅವರು ಪ ಮಾತನಾಡಿ ರಾಜ್ಯದಲ್ಲಿ ರೈತನ ಮಗ ಕೃಷಿ ಸಚಿವರಾಗಿರುವುದು ಹೆಚ್ಚು ಗೌರವ ತಂದಿದೆ ಎಂದರು.
ತಾವು ಹಲವು ವರ್ಷಗಳಿಂದ ಪ್ರತಿದಿನ ಎರಡು ಹೊತ್ತು ಸಿರಿಧಾನ್ಯದ ಬಳಸುತ್ತಿದ್ದು ಆರೋಗ್ಯ ವೃದ್ದಿಗೆ ಹೆಚ್ಚು ಸಹಕಾರಿಯಾಗಿದೆ ಎಂದರು.
ಕೃಷಿ ಆಯುಕ್ತರಾದ ವೈ.ಎಸ್ ಪಾಟೀಲ್, ನಿರ್ದೇಶಕರಾದ ಡಾ. ಜಿ.ಟಿ ಪುತ್ರ ಹಾಗೂ ಕ್ರೈಸ್ಟ್ ಕಾಲೇಜಿನ ಪ್ರಮುಖರು ಹಾಜರಿದ್ದರು..