ಬಾಲಿವುಡ್ನ ಖ್ಯಾತ ನಟ ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಅವರ ನಟನೆಯ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೇಳ ಹೆಸರಿಲ್ಲದಂತಾಗಿವೆ. ಏನೇ ಪ್ರಯತ್ನ ಮಾಡಿದರೂ, ಎಷ್ಟೇ ಸಿನಿಮಾ ಮಾಡಿದರೂ ಅವರಿಗೆ ಸಕ್ಸಸ್ ಸಿಗುತ್ತಿಲ್ಲ. ಇದರಿಂದ ನಿರ್ಮಾಪಕರು ಅಸಮಾಧಾನ ಗೊಂಡಿದ್ದಾರೆ. ಅಲ್ಲದೆ ಗಡಿಬಿಡಿಯಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಅನೇಕರು ಟೀಕಿಸಿದ್ದಾರೆ. ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನನಗೂ ನಿರ್ಮಾಪಕರಿಂದ ಮೋಸ ಆಗಿದೆ ಎಂದಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಹಾಗೂ ‘ಸರ್ಫಿರಾ’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ನೆಲ ಕಚ್ಚಿತ್ತು. ಆ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಜಾಕಿ ಭಗ್ನಾನಿ ಮತ್ತು ವಶು ಭಗ್ನಾನಿ ಅವರು ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿಗೆ ಬಂದರು. ಇದಕ್ಕೆಲ್ಲ ಅಕ್ಷಯ್ ಕುಮಾರ್ ಕಾರಣ ಎಂದು ಅನೇಕರು ಆರೋಪಿಸಿದ್ದರು. ಆದರೆ ಆ ವೇಳೆ ಅಕ್ಷಯ್ ಕುಮಾರ್ ತಮ್ಮ ಸಂಭಾವನೆ ಪಡೆಯದೆ ನಿರ್ಮಾಪಕರಿಗೆ ನೆರವಾಗಿದ್ದರು. ಆದರೆ ಸಾಕಷ್ಟು ನಿರ್ಮಾಪಕರು ತಮಗೆ ಸಂಭಾವನೆ ನೀಡಿದೆ ಮೋಸ ಮಾಡಿದ್ದಾರೆ ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಅನೇಕ ನಿರ್ಮಾಪಕರಿಂದ ಅಕ್ಷಯ್ ಕುಮಾರ್ ಅವರಿಗೆ ಮೋಸ ಆಗಿದೆ. ಆ ಬಗ್ಗೆ ಅವರು ಈಗ ಬಾಯಿ ಬಿಟ್ಟಿದ್ದಾರೆ. ‘ಕಾಮನ್ ಆಗಿ ಈ ರೀತಿ ಆಗುತ್ತದೆ. ಆ ಬಳಿಕ ಅಂಥವರ ಜೊತೆ ನಾನು ಮಾತನಾಡುವುದಿಲ್ಲ. ಸುಮ್ಮನೇ ಮೌನವಾಗಿ ಇರುತ್ತೇನೆ. ಒಂದಿಬ್ಬರು ನಿರ್ಮಾಪಕರಿಂದ ಸಂಭಾವನೆ ಬರುವುದೇ ಇಲ್ಲ. ಅದು ಮೋಸವಲ್ಲದೇ ಮತ್ತೇನೂ ಅಲ್ಲ’ ಎಂದಿದ್ದಾರೆ.
ಗುಣಮಟ್ಟಕ್ಕೆ ಗಮನ ನೀಡದೇ ಕೇವಲ ಸಿನಿಮಾಗಳ ಸಂಖ್ಯೆ ಹೆಚ್ಚಿಸುತ್ತಾರೆ ಎಂಬ ಕಾರಣಕ್ಕೆ ಅಕ್ಷಯ್ ಅವರನ್ನು ಟೀಕಿಸಲಾಗುತ್ತಿದೆ. ಅದಕ್ಕೂ ಪ್ರತಿಕ್ರಿಯಿಸಿರುವ ಅಕ್ಕಿ, ‘ಕೇವಲ ನಾನು ಒಂದು ಸಿನಿಮಾ ಮಾಡಿದೆ, ಇನ್ನುಳಿದ ದಿನಗಳಲ್ಲಿ ಏನು ಮಾಡಲಿ?’ ಎಂದು ಅವರು ಪ್ರಶ್ನಿಸಿದ್ದಾರೆ. ತಾವು ಹೆಚ್ಚು ಸಿನಿಮಾಗಳನ್ನು ಮಾಡುವುದರಿಂದ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಹೇಳಿದ್ದಾರೆ.