ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಪತಿ ಹಾಗೂ ಮಗಳೊಂದಿಗೆ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ವಾಸವಾಗಿರುವ ನಟಿ ಇದೀಗ ತೆಲಂಗಾಣದ ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇಂದು (ಜ.21) ತೆಲಂಗಾಣದ ಚಿಲ್ಕೂರ್ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಪ್ರಿಯಾಂಕಾ ಚೋಪ್ರಾ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ನಟಿ ಸಮಯ ಕಳೆದಿದ್ದು, ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋ ಶೇರ್ ಮಾಡಿ, ಶ್ರೀ ಬಾಲಾಜಿ ಆಶೀರ್ವಾದದಿಂದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.
ನಮ್ಮ ಸುತ್ತಲೂ ಶಾಂತಿ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳೋಣ. ಎಲ್ಲಾ ಅನುಗ್ರಹ ಎಂದು ನಟಿ ಬರೆದುಕೊಂಡಿದ್ದಾರೆ. ಜೊತೆಗೆ ರಾಮ್ ಚರಣ್ ಪತ್ನಿ ಉಪಾಸನಾಗೆ ಪ್ರಿಯಾಂಕಾ ಥ್ಯಾಂಕ್ಯೂ ಹೇಳಿದ್ದಾರೆ.
ರಾಜಮೌಳಿ ಮತ್ತು ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ನಡುವೆ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಹೊಸ ಅಧ್ಯಾಯ ಆರಂಭ ಎಂದು ನಟಿ ಬರೆದುಕೊಂಡಿರೋದು ನೋಡಿ ಊಹಾಪೋಹಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ. ಹೀಗಾಗಿ ಪ್ರಿಯಾಂಕ ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ.