ವಿನೋದ್ ಪ್ರಭಾಕರ್ ನಟನೆಯ ಕೆ.ಎಂ ಚೈತನ್ಯ ನಿರ್ದೇಶನದ ಬಲರಾಮನ ದಿನಗಳು ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಬಿಗ್ ಬಜೆಟ್ ನಲ್ಲಿ ರೆಡಿಯಾಗುತ್ತಿರುವ ಈ ಸಿನಿಮಾ ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾವಾಗಿದ್ದು ‘ಪದ್ಮಾವತಿ ಫಿಲ್ಮ್ಸ್’ ಮೂಲಕ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ಅವರು ಬಂಡವಾಳ ಹೂಡುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ಎಂಟ್ರಿಕೊಟ್ಟಿದ್ದಾರೆ.
ವಿನೋದ್ ಪ್ರಭಾಕರ್ ಅಭಿಮಾನಿಗಳು ‘ಬಲರಾಮನ ದಿನಗಳು’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಇದೀಗ ಸಿನಿಮಾಗೆ ಪ್ರಿಯಾ ಆನಂದ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ ಕನ್ನಡದಲ್ಲಿ ‘ರಾಜಕುಮಾರ’, ‘ಜೇಮ್ಸ್’, ‘ಆರೆಂಜ್’, ‘ಕರಟಕ ದಮನಕ’ ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರಿಯಾ ಆನಂದ್ ‘ಬಲರಾಮನ ದಿನಗಳು’ ಸಿನಿಮಾದ ಮೂಲಕ ಮತ್ತೆ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ.
ಹೊಸ ವರ್ಷದ ಪ್ರಯುಕ್ತ ಜನವರಿ 1ರಂದು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಪ್ರಿಯಾ ಆನಂದ್ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಗಿದೆ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ತೋರಿಸಲಾಗುವುದು. ಕೆಲವು ದಿನಗಳ ಹಿಂದೆ ವಿನೋದ್ ಪ್ರಭಾಕರ್ ಅವರ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿತ್ತು. ಅಭಿಮಾನಿಗಳಿಗೆ ಆ ಲುಕ್ ಇಷ್ಟ ಆಗಿತ್ತು.
‘ಬಲರಾಮನ ದಿನಗಳು’ ಸಿನಿಮಾದಲ್ಲಿ ಒಂದಷ್ಟು ವಿಶೇಷತೆಗಳಿವೆ. ‘ಅಟ್ಟಕತ್ತಿ’, ‘ಕಬಾಲಿ’, ‘ಕಾಲ’, ‘ಭೈರವ’, ‘ಕಲ್ಕಿ’, ‘ದಸರಾ’ ಮುಂತಾದ ಯಶಸ್ವಿ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಂತೋಷ್ ನಾರಾಯಣನ್ ಅವರು ‘ಬಲರಾಮನ ದಿನಗಳು’ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದು ಅವರ 51ನೇ ಚಿತ್ರವಾಗಿದ್ದು ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.