ಬಳ್ಳಾರಿ : ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ನೀಡಲಿಲ್ಲವೆಂದು ಬಿತ್ತನೆ ಮಾಡಿದ ಹೊಲದಲ್ಲಿ ರಾತ್ರೋರಾತ್ರಿ ಖಾಸಗಿ ಕಂಪನಿ ಸಿಬ್ಬಂದಿಗಳು ಜೆಸಿಬಿ ತಂದು ಬೆಳೆ ನಾಶ ಮಾಡಿ ಅಟ್ಟಹಾಸ ಮೇರೆದಿರುವಂತಹ ಘಟನೆ ಸಂಡೂರು ತಾಲೂಕಿನ ರಣಜಿತ್ ಪುರ ಗ್ರಾಮದಲ್ಲಿ ನಡೆದಿದೆ.
ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆ ನಾಶ ಕಂಡು ಅನ್ನದಾತರು ಕಣ್ಣಿರು ಹಾಕಿದ್ದಾರೆ. ಕಾಡಪ್ಪ ಮತ್ತು ಪರಮೇಶ್ವರಪ್ಪ ಸೇರಿದಂತೆ ಇತರೆ ರೈತರ ಬೆಳೆನಾಶ ಮಾಡಲಾಗಿದೆ.ಕಷ್ಟಪಟ್ಟು ಬಿತ್ತಿದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಕೃಷಿ ಪರಿಕಗಳ ನಾಶ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.
ಸಂಡೂರಿನ ಖಾಸಗಿ ಕಂಪನಿಯವರು (ಆರ್ಐಪಿಎಲ್) ತಮ್ಮ ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ತೆಗೆದುಕೊಳ್ಳಲು ಪಯತ್ನ ನಡೆಸಿದ್ದಾರೆ. ಭೂಮಿ ನೀಡುವುದಿಲ್ಲ ಎಂದು ಹೇಳಿದ್ದರು ಕೆಐಡಿಬಿ ಮೂಲಕ ಖಾಸಗಿ ಕಂಪನಿ ಒತ್ತಡ ಹಾಕುತ್ತಿದೆ. ಆದರೆ ರೈತರು ಮಾತ್ರ ಭೂಮಿ ನೀಡುತ್ತಿಲ್ಲ. ಈ ಬಗ್ಗೆ ಧಾರವಾಡ ಹೈಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ.
ಈ ಮಧ್ಯೆ ರಾತ್ರೋರಾತ್ರಿ ಕಂಪನಿಯವರು ಜಮೀನಿನಲ್ಲಿ ಬೆಳೆದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ನಾಶ ಮಾಡಿದ್ದಾರೆ. ಮಳೆ ಇಲ್ಲದೇ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಲಾಗಿದೆ. ಇದೀಗ ಖಾಸಗಿ ಕಂಪನಿ ವಿರುದ್ಧ ರೈತರು ಪೊಲೀಸ್ ಠಾಣೆ ಮೆಟ್ಡಿಲೇರಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.