ಪೀಣ್ಯ ದಾಸರಹಳ್ಳಿ:’ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಕೆರೆ ಗುಡ್ಡದಹಳ್ಳಿ ಸರ್ಕಾರಿ ಶಾಲೆಗೆ ಕೊಠಡಿ ಮತ್ತು ಚರಂಡಿ, ಮಂಜುನಾಥ ನಗರದ ಸರ್ಕಾರಿ ಶಾಲೆಗೆ ನೂತನ 5 ಕೊಠಡಿ ನಿರ್ಮಾಣ, ಮಲ್ಲಸಂದ್ರದಲ್ಲಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಈ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ಒಂದು ಕೊಠಡಿ ಸಹ ನಿರ್ಮಾಣವಾಗಿಲ್ಲ, ನನ್ನ ಅವಧಿಯಲ್ಲಿ 300ಕ್ಕೂ ಹೆಚ್ಚು ಕೊಠಡಿಗಳು, ಕಾಂಪೌಂಡು, ಪೀಠೋಪಕರಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇನ್ನು ಮುಂತಾದ ಸೌಲಭ್ಯಗಳನ್ನು ಸರ್ಕಾರಿ ಶಾಲೆಗಳಿಗೆ ಮಾಡಲಾಗಿತ್ತು’ ಎಂದು ವಿವರಿಸಿದರು.
ಮಂಜುನಾಥ ನಗರದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು 1100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಕೊಠಡಿಗಳ ಕೊರತೆ ಇದ್ದು ಅನೇಕ ವಿದ್ಯಾರ್ಥಿಗಳು ದಾಖಲಾತಿ ಸಿಗದೇ ವಾಪಸ್ ಹೋಗಿದ್ದಾರೆ. ಖಾಸಗಿ ಶಾಲೆಯಲ್ಲಿ ಸಿಗುವಂತಹ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲೂ ಸಿಗಬೇಕು ಎಂಬ ನಿಟ್ಟಿನಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣ ಸಹ ಮಾಡಲಾಗುತ್ತಿದೆ’ ಎಂದರು.
ದಾಸರಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 16 ಕೊಠಡಿ ಇತ್ತು. ಈಗ 40 ಕೊಠಡಿಗಳನ್ನು ತರಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಪರಿಶುದ್ಧ ವಾತಾವರಣ, ವಿಶಾಲವಾದ ಕೊಠಡಿ ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ. ಕೊಟ್ಟಡಿ ನಿರ್ಮಾಣ ಹಂತದಲ್ಲಿ ನಾವು ಬಂದು ಗುಣಮಟ್ಟ ಪರಿಶೀಲಿಸುತ್ತೇವೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ’ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಬಿಜೆಪಿ ಮುಖಂಡರಾದ ನವೀನ್, ಹೆಮಾಚಲರೆಡ್ಡಿ, ಎಂ ಆನಂದ್, ಚಿಕ್ಕಲಕ್ಕಣ್ಣ, ಗಂಗರಾಜು, ಪಾಂಡುರಂಗ ರಾವ್, ಬಲರಾಮ್ ಮುಖ್ಯ ಶಿಕ್ಷಕ ವೇಣುಗೋಪಾಲ್ ಮುಂತಾದವರಿದ್ದರು.