ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯೆಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಡಿ.30) ಸಂಪೂರ್ಣ ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ (Railway Station) ಉದ್ಘಾಟನೆ ನೆರವೇರಿಸಿದರು.
ಬಳಿಕ ರೈಲು ನಿಲ್ದಾಣವನ್ನ ಪರಿಶೀಲಿಸಿದ ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ 2 ಅಮೃತ್ ಭಾರತ್ ರೈಲು ಹಾಗೂ 6 ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೂ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಸಚಿವ ಅಶ್ವಿನಿ ವೈಷ್ಣವ್ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.
ಏರ್ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದೆ. 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ.
ರೈಲು ನಿಲ್ದಾಣ ಅಭಿವೃದ್ಧಿಗೆ 3 ಪ್ಲಾಟ್ ಫಾರಂಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.