ತಮಿಳಿನ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡೆಲ್ಲಿ ಗಣೇಶ್ 80ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಹಲವು ಭಾಷೆಗಳಲ್ಲಿ ಡೆಲ್ಲಿ ಗಣೇಶ್ ನಟಿಸಿದ್ದಾರೆ. ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರು. ಗಣೇಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಡೆಲ್ಲಿ ಗಣೇಶ್ ನಿಧನಕ್ಕೆ ತಮಿಳು ಚಿತ್ರರಂಗ ಅನೇಕರು ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಪ್ರಖ್ಯಾತ ಚಲನಚಿತ್ರ ನಟ ಡೆಲ್ಲಿ ಗಣೇಶ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ನಟನಾ ಕೌಶಲ್ಯದಿಂದ ಹೆಸರು ಮಾಡಿದ್ರು. ಪ್ರತಿ ಪಾತ್ರಕ್ಕೂ ಜೀವ ತುಂಬಿದವರು. ತಲೆಮಾರುಗಳಾದ್ಯಂತ ವೀಕ್ಷಕರನ್ನು ರಂಜಿಸಿದ್ರು. ರಂಗಭೂಮಿಯ ಬಗ್ಗೆಯೂ ಒಲವು ಹೊಂದಿದ್ದರು. ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಮೋದಿ ಬರೆದುಕೊಂಡಿದ್ದಾರೆ.
ಕೆ ಬಾಲಚಂಧರ್ ಅವರಂಥಹಾ ಮೇರು ನಿರ್ದೇಶಕರ ಸಿನಿಮಾ ಮೂಲಕ ನಟನೆ ಆರಂಭಿಸಿದ ಡೆಲ್ಲಿ ಗಣೇಶ್, ಹಲವು ಸ್ಟಾರ್ ನಟ-ನಟಿಯರೊಟ್ಟಿಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆರಂಭದಲ್ಲಿ ನಾಯಕ, ಎರಡನೇ ನಾಯಕ, ವಿಲನ್ ಪಾತ್ರಗಳಲ್ಲಿ ನಟಿಸಿದ ಡೆಲ್ಲಿ ಗಣೇಶ್, ವಯಸ್ಸಾದಂತೆ, ತಂದೆ, ಮಾವ, ಚಿಕ್ಕಪ್ಪ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ನಟಿಸಿ ಡೆಲ್ಲಿ ಗಣೇಶ್ ಖ್ಯಾತಿ ಘಳಿಸಿದ್ದರು.
1976 ರಿಂದಲೂ ನಟಿಸುತ್ತಿರುವ ಡೆಲ್ಲಿ ಗಣೇಶ್, ತಮಿಳು, ಮಲಯಾಳ, ತೆಲುಗು ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ ‘ಚೆನ್ನೈ ಎಕ್ಸ್ಪ್ರೆಸ್’ ಸಿನಿಮಾದಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಸುಮಾರು 25ಕ್ಕೂ ಹೆಚ್ಚು ಟಿವಿ ಧಾರಾವಾಹಿಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ಎರಡು ವೆಬ್ ಸರಣಿಗಳಲ್ಲಿಯೂ ಸಹ ಡೆಲ್ಲಿ ಗಣೇಶ್ ನಟಿಸಿದ್ದಾರೆ. ವಿಶೇಷವೆಂದರೆ ಶಂಕರ್ ನಾಗ್ ನಿರ್ದೇಶನ ಮಾಡಿರುವ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿಯೂ ಸಹ ಡೆಲ್ಲಿ ಗಣೇಶ್ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು.