ಬ್ರಾಂಪ್ಟನ್ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನಿ ಉಗ್ರಗಾಮಿಗಳು ನಡೆಸಿದ ದಾಳಿಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಖಂಡಿಸಿದ್ದು ಪ್ರತಿಯೊಬ್ಬ ಕೆನಡಾದವರಿಗೆ ತಮ್ಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕಿದೆ ಎಂದಿದ್ದಾರೆ.
ಬ್ರಾಂಪ್ಟನ್ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕತ್ಯಗಳು ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಾದವರು ತಮ ನಂಬಿಕೆಯನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಸಮುದಾಯವನ್ನು ರಕ್ಷಿಸಲು ಮತ್ತು ಈ ಘಟನೆಯ ತನಿಖೆಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಪೀಲ್ ಪ್ರಾದೇಶಿಕ ಪೊಲೀಸರಿಗೆ ಧನ್ಯವಾದಗಳು ಎಂದು ಟ್ರುಡೋ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ಆಗಿರುವ ವೀಡಿಯೊಗಳಲ್ಲಿ ಗುಂಪೊಂದು ದೇವಾಲಯದ ಆವರಣವನ್ನು ಪ್ರವೇಶಿಸಿ ಭಕ್ತರ ಮೇಲೆ ಹಲ್ಲೆ ನಡೆಸುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ಯಾರನ್ನು ಕೂಡ ಬಂಧಿಸಲಾಗಿಲ್ಲ. ಕೆನಡಾ ಸಂಸದ ಚಂದ್ರ ಆರ್ಯ ಈ ಕುರಿತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿ ಹಿಂಸಾತ್ಮಕ ಮನಸ್ಥಿತಿಯು ಎಷ್ಟು ಆಳವಾಗಿದೆ ಎನ್ನುವುದನ್ನು ಈ ಘಟನೆಯು ತೋರಿಸುತ್ತದೆ ಎಂದು ಹೇಳಿದ್ದಾರೆ.
ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಜನರನ್ನು ಒಗ್ಗೂಡಿಸಿ ಗೊಂದಲವನ್ನು ನಿವಾರಿಸುವುದಾಗಿ ಹೇಳಿದ್ದಾರೆ. ಟೊರೊಂಟೊ ಸಂಸದ ಕೆವಿನ್ ವುಂಗ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ನಾಯಕರು ಹಿಂದೂಗಳನ್ನು, ಕ್ರಿಶ್ಚಿಯನ್ನರು ಮತ್ತು ಯಹೂದಿ ಕೆನಡಿಯನ್ನರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ನಾವೆಲ್ಲರೂ ಶಾಂತಿಯಿಂದ ಪೂಜಿಸಲು ಅರ್ಹರು ಎಂದು ಹೇಳಿದ್ದಾರೆ.
ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ಹಾಗೂ ಕೆನಡಾ ನಡುವಿನ ಸಂಬಂಧ ಹದಗೆಟ್ಟಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಕೈವಾಡದ ಬಗ್ಗೆ ಕೆನಡಾ ಆರೋಪಿಸಿತ್ತು. ಈ ಆರೋಪವನ್ನು ಭಾರತ ತಳ್ಳಿಹಾಕಿದೆ.