ಕೋಲ್ಕತ್ತಾ: ಭಾರತದ ಮೊದಲ ನದಿಯೊಳಗಿನ ಮೆಟ್ರೋ ( India’s 1st underwater Metro route) ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆ ಮಾಡಿದ್ದಾರೆ.
ಕೋಲ್ಕತಾ (Kolkatta ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಹೂಗ್ಲಿ ನದಿಯು ಕೋಲ್ಕತ್ತಾ ಮತ್ತು ಹೌರಾ ಅವಳಿ ನಗರಗಳನ್ನು ಕ್ರಮವಾಗಿ ಪೂರ್ವ ಮತ್ತು ಪಶ್ಚಿಮ ದಂಡೆಗಳಲ್ಲಿ ಪ್ರತ್ಯೇಕಿಸುತ್ತದೆ. ಈ ಎರಡು ನಗರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ.
ಈ ರೈಲು ಮಾರ್ಗ 16.6 ಕಿಲೋಮೀಟರ್ ಉದ್ದವನ್ನು ಹೊಂದಿದ್ದು 6 ನಿಲ್ದಾಣಗಳನ್ನು ಇರಲಿದೆ. 6 ನಿಲ್ದಾಣಗಳ ಪೈಕಿ 3 ನಿಲ್ದಾಣಗಳು ನೀರಿನ ಅಡಿಯಲ್ಲಿ ಮತ್ತು 3 ನಿಲ್ದಾಣಗಳು ನೆಲದ ಮೇಲೆ ನಿರ್ಮಾಣವಾಗಿದೆ.
4,965 ಕೋಟಿ ರೂ. ವೆಚ್ಚದಲ್ಲಿ 4.8 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣಗೊಂಡಿದೆ. ನೆಲಮಟ್ಟದಿಂದ 30 ಮೀಟರ್ ಅಡಿಯಲ್ಲಿ ನಿಲ್ದಾಣ ನಿರ್ಮಾಣವಾಗುವ ಮೂಲಕ ಹೌರಾವು ಭಾರತದ ಆಳವಾದ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಅಡಿಪಾಯವನ್ನು ಫೆಬ್ರವರಿ 2009 ರಲ್ಲೇ ಹಾಕಲಾಗಿತ್ತು. ಆದರೆ ನೀರೊಳಗಿನ ಮೆಟ್ರೋ ಸುರಂಗದ ನಿರ್ಮಾಣ ಕಾರ್ಯ 2017 ರಲ್ಲಿ ಆರಂಭವಾಗಿತ್ತು.