ಮೈಸೂರು:- ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆಯಾಗಲಿ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಅವಧಿ ಸಮೀಪಿಸುತ್ತಿದೆ. ಈ ವೇಳೆ ಭಾರಿ ಭದ್ರತಾ ವೈಫಲ್ಯ ಕಾಣಿಸಿಕೊಂಡಿದೆ.
ಇದರಿಂದ ಲೋಕಸಭೆಯೊಳಗೆ ಆತಂಕ ಸೃಷ್ಟಿ ಆಗಿದ್ದು, ನಮ್ಮ ಮೈಸೂರಿನ ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿರುವುದು ಸ್ಪಷ್ಟವಾಗಿದೆ.
ಒಂದು ವೇಳೆ ಅಲ್ಲಿ ಏನಾದರೂ ದೊಡ್ಡ ಅನಾಹುತ ಘಟಿಸಿದ್ದರೆ ಅದಕ್ಕೆ ಯಾರು ಜವಾಬ್ದಾರಿ?. ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು ಮತ್ತು ಇದರ ಹಿಂದಿನ ನೈಜ ಕಾರಣಗಳನ್ನು ಪತ್ತೆ ಹಚ್ಚಬೇಕೆಂದು ಈ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಚಿವ ಡಾ. ಎಚ್ ಸಿ ಮಹದೇವಪ್ಪ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಬುಧವಾರ ಸದನಕ್ಕೆ ಹಾರಿದ್ದ ಆರೋಪಿಗೆ ಪಾಸ್ ನೀಡಿದ ಆರೋಪದ ಮೇಲೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡುವಂತೆ ಟಿಎಂಸಿ ಒತ್ತಾಯಿಸಿದೆ. ಅಲ್ಲದೇ, ಹಲವು ಪ್ರಶ್ನೆಗಳನ್ನೂ ಟಿಎಂಸಿ ಎತ್ತಿದೆ. ತಮ್ಮ ಲಾಗಿನ್ ಸೌಲಭ್ಯಗಳನ್ನು ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ನಮ್ಮ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಅನ್ಯಾಯವಾಗಿ ಹೊರಹಾಕಲಾಗಿದೆ. ಬುಧವಾರ ಕರ್ನಾಟಕದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಸಂಸತ್ತಿಗೆ ಒಳನುಗ್ಗುವವರಿಗೆ ವಿಸಿಟರ್ ಪಾಸ್ ನೀಡುವ ಮೂಲಕ ಇಡೀ ಸಂಸತ್ತಿನ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.