ಬೀದರ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ವಿಕ್ರಂ ಸಿಂಹರನ್ನು ಬಂಧಿಸಿರುವುದು ಕಾನೂನಿನ ವಿರುದ್ಧವಾಗಿದೆ. ಎಫ್ಐಆರ್ನಲ್ಲಿ ಹೆಸರಿಲ್ಲದಿದ್ದರೂ ಅವರನ್ನು ಬಂಧಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ (Pratap Simha) ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯನವರ ಕುತಂತ್ರವಾಗಿದೆ.
ಈ ರೀತಿ ಕುತಂತ್ರ ಮಾಡಿದರೂ ಸಹ ಪ್ರತಾಪ್ ಸಿಂಹ ಅವರನ್ನು ಅಲ್ಲಿಯ ಜನ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ಪೊಲೀಸರು ಯಾರ ಮೂಗಿನ ಅಳತೆ ಮೇಲೆ ಕೆಲಸ ಮಾಡುತ್ತಿರುವುದು ಗೊತ್ತಿದೆ. ಇದು ಸರಿಯಾದ ನಡೆಯಲ್ಲ. ಪ್ರತಾಪ್ ಸಿಂಹ ಅವರೇ ನೀವು ಎದೆಗುಂದುವುದು ಬೇಡ, ಸತ್ಯಕ್ಕೆ ಜಯವಾಗಲಿದೆ ಎಂದಿದ್ದಾರೆ.