ಬೀದರ್:- ಸರ್ಕಾರದ ಮೇಲೆ ಗೂಬೆ ಕೂರಿಸಿದ್ರೆ ಪ್ರತಾಪ್ ಸಿಂಹಾಗೆ ಶೋಭೆ ತರಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಅಕ್ರಮವಾಗಿ ಮರಗಳ ಮಾರಣಹೋಮ ಹಿನ್ನಲೆ ವಿಕ್ರಂ ಸಿಂಹ ಬಂಧನ ಘಟನೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸುಮ್ಮನೆ ಸಿಎಂ ಮತ್ತು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದು, ಇದನ್ನು ಗಮನಿಸಿದರೆ ಈ ಅಪರಾಧದಲ್ಲಿ ಅವರು ಸಹ ಪರೋಕ್ಷವಾಗಿ ಭಾಗಿಯಾಗಿದ್ದಾರೆಂದು ಭಾವಿಸಬೇಕಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿರುಗೇಟು ಕೊಟ್ಟಿದ್ದಾರೆ.
ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಶುಂಠಿ ಬೆಳೆಯುವುದಾಗಿ ಕರಾರು ಮಾಡಿಕೊಂಡು, ಹಾಡುಹಗಲಲ್ಲೇ 126 ಬೆಲೆ ಬಾಳುವ ಮರಗಳನ್ನು ಕಡಿದಿದ್ದಾರೆ. ಒಬ್ಬ ಜವಾಬ್ದಾರಿಯುತ ಸಂಸದರಾಗಿರುವ ಪ್ರತಾಪ್, ನಿಷ್ಪಕ್ಷಪಾತ ತನಿಖೆ ಮತ್ತು ಯಾರೇ ತಪ್ಪಿತಸ್ಥರಿರಾಗಲಿ ಅವರಿಗೆ ಶಿಕ್ಷೆ ಆಗಲಿ ಎಂದು ಹೇಳಬೇಕಿತ್ತು ಎಂದರು.
ಆದರೆ, ಕಾನೂನು ಉಲ್ಲಂಘಿಸಿ, ತನಿಖೆಯ ದಾರಿ ತಪ್ಪಿಸಲು ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕಲು ಅಧಿಕಾರದ ದುರುಪಯೋಗ ಮಾಡಿಕೊಳ್ಳಲಾಗಿದೆ. ತಮ್ಮ ಮಗನನ್ನು ಸಂಸದರಾಗಿ ಮಾಡಲು ಸಿಎಂ ಷಡ್ಯಂತ್ರ ನಡೆಸಿದ್ದಾರೆಂಬ ಪ್ರತಾಪ್ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಎಂದು ಹೇಳಿದ್ದಾರೆ.